ಕುಂದಾಪುರ,ಮಾ 16 (MSP): ಉಡುಪಿ ತಾಲೂಕಿನ ಯಡ್ತಾಡಿ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ಕೊರಡುಗಳನ್ನು ಸಾಗಟ ಮಾಡುತ್ತಿದ್ದ ಸೀತಾರಾಮ, ಚಂದ್ರ ಹಾಗೂ ಅವುಗಳನ್ನು ಕೊಳ್ಳುವುದಾಗಿ ಪ್ರಚೋದನೆ ಮಾಡಿದ ರಂಗನಕೆರೆಯ ಅಬ್ದುಲ್ ಎನ್ನುವವರನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಮಾ.16 ರ ಶನಿವಾರ ದೋಷ ಮುಕ್ತಗೊಳಿಸಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೃತ್ಯಕ್ಕೆ ಉಪಯೋಗಿಸಿದ ಕೈಗರಗಸ, ಕುಂಟಾಣಿ ಹಾಗೂ ಮಂಡೆ ಕತ್ತಿಗಳನ್ನು ಆರೋಪಿತರಿಂದ ಸ್ವಾಧೀನ ಪಡಿಸಿಕೊಂಡಿದ್ದರು. ಯೆಡ್ತಾಡಿ ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರ ಕಡಿದಿದ್ದಾಗಿ ತನಿಖೆಯಲ್ಲಿ ಕಂಡು ಬಂದಿತ್ತು. ಭಾರತೀಯ ಅರಣ್ಯ ಕಾಯಿದೆಯ ಕಲಂ 86 ಹಾಗೂ 87ರ ಕೆಳಗೆ ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು.
ಪ್ರಕರಣದ ಕೂಲಂಕುಶ ವಿಚಾರಣೆ ಮಾಡಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಧೀಶರಾದ ಪ್ರಕಾಶ್ ಖಂಡೇರಿಯವರು ಮೂರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಮೂರು ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.