ಬಂಟ್ವಾಳ, ಮಾ 16(SM): ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟದಲ್ಲಿ ನಿರತರಾಗಿದ್ದ 70 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಎಂಬಲ್ಲಿ ನಡೆದಿದೆ.
ಮೆಲ್ಕಾರ್ ನಲ್ಲಿರುವ ಪ್ರಸನ್ನ ಕಾಂಪ್ಲೆಕ್ಸ್ ನ ರೀಕೃಯೇಷನ್ ಕ್ಲಬ್ ನಲ್ಲಿ ಅಕ್ರಮವಾಗಿ ಜೂಜಾಟ ನಡೆಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು 70 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಕ್ಲಬ್ ನ ಮ್ಯಾನೇಜರ್ ಸಾಯಿ ಕಿರಣ್( 37) ಮಂಜೇಶ್ವರ ಈತನ ಸಹಿತ ಜೂಜಾಟದಲ್ಲಿ ನಿರತರಾಗಿದ್ದ 70 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೂಜಾಟಕ್ಕೆ ಪಣವಾಗಿಟ್ಟಿದ್ದ 72,100 ರೂ. ಮತ್ತು 1 ಲಕ್ಷ ರೂ ಮೌಲ್ಯದ ವಿವಿಧ ಕಂಪನಿಯ 51 ಮೊಬೈಲುಗಳು, 2 ಡಿವಿಆರ್ ಗಳು, ಒಂದು ರೌಂಡ್ ಟೇಬಲ್, 7 ಕುರ್ಚಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್, ನಗರ ಠಾಣೆಯ ಎಸ್. ಐ.ಗಳಾದ ಚಂದ್ರಶೇಖರ್, ಸುಧಾಕರ ತೋನ್ಸೆ ಹಾಗೂ ಸಂಚಾರಿ ಠಾಣೆಯ ಎಸ್ .ಐ. ಮಂಜುನಾಥ್ ಮತ್ತು ಸಿಬ್ಬಂದಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ತಪಾಸಣೆ ನಡೆಸಿದಾಗ ಕ್ಲಬ್ ಗೆ ಯಾವುದೇ ಪರವಾನಿಗೆ ಇಲ್ಲದಿರುವುದು ಮತ್ತು ಉಚ್ಚ ನ್ಯಾಯಾಲಯದ ನಿಯಮವನ್ನು ಉಲ್ಲಂಘಿಸಿ ಜೂಜಾಡುತ್ತಿರುವುದು ಬಯಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.