ಮಂಗಳೂರು, ಮಾ 16(SM): ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿದ್ದ ಮತ್ತೊಂದು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮಾರ್ಚ್ 16ರ ಶನಿವಾರದಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ ಸ್ಪೈಸ್ ಜೆಟ್ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನೋರ್ವ ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿದ್ದ. ಪುಡಿ ಹಾಗೂ ಚೂರ್ಣ ರೂಪದಲ್ಲಿ ವಿದೇಶಿ ಚಿನ್ನವನ್ನು ಆರೋಪಿ ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ಗುದನಾಳದಲ್ಲಿ ಗೌಪ್ಯವಾಗಿರಿಸಿ ಚಿನ್ನ ಸಾಗಾಟ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಬಂಧಿತ ಪ್ರಯಾಣಿಕ ಸುಮಾರು 19.49 ಲಕ್ಷ ರೂ. ಮೌಲ್ಯದ 632 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದುದು, ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಸದ್ಯ ಬಂಧಿಸಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಈ ಮೂಲಕ ಒಂದೇ ವಾರದಲ್ಲಿ 2ನೇ ಪ್ರಕರಣವನ್ನು ಬಯಲಿಗೆ ತರುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಾರ್ಚ್ 11ರಂದು ಸುಮಾರು 15.92 ಲಕ್ಷ ರೂ. ಮೌಲ್ಯದ ಚಿನ್ನವನ್ನು ದುಬೈಯಿಂದ ಬಂದ ಓರ್ವ ಪ್ರಯಾಣಿಕನಿಂದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.