ಕಾಸರಗೋಡು,ಮಾ.17(AZM) : ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಥಳೀಯ ನಾಯಕ ಬಿ . ಸುಬ್ಬಯ್ಯ ರೈ ಯವರ ಬದಲು ರಾಜ್ ಮೋಹನ್ ಉಣ್ಣಿ ತ್ತಾನ್ ರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿರುವುದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರೊಳಗೆ ಅಸಮಧಾನ ವ್ಯಕ್ತಗೊಂಡಿದ್ದು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಕೆ .ಪಿ ಸಿ.ಸಿ ಸದಸ್ಯ ಬಿ . ಸುಬ್ಬಯ್ಯ ರೈ ರವರ ಹೆಸರು ಅಗ್ರಪಂಕ್ತಿ ಯಲ್ಲಿದ್ದರೂ ಅಂತಿಮ ಕ್ಷಣದಲ್ಲಿ ರಾಜ್ ಮೋಹನ್ ಉಣ್ಣಿತ್ತಾನ್ ರವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು , ಇದರಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಅಸಮಧಾನ ವ್ಯಕ್ತವಾಗಿದೆ. ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕುನ್ನಿಲ್ ವಿರುದ್ಧ ಪಕ್ಷದ ಒಂದು ಬಣ ಸಿಡಿದೆದ್ದಿದ್ದು, ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ.
ಮಾಜಿ ಸಂಸದ ಐ . ರಾಮ ರೈ ರವರ ಪುತ್ರ ರಾಗಿರುವ ಬಿ . ಸುಬ್ಬಯ್ಯ ರೈ ರವರಿಗೆ ಟಿಕೆಟ್ ಖಚಿತವಾಗಿದ್ದು , ಕಳೆದ ಒಂದು ವಾರದಿಂದ ಜಿಲ್ಲೆಯ ಹಲವೆಡೆ ಸುಬ್ಬಯ್ಯ ರೈ ಮತಯಾಚನೆ ನಡೆಸಿದ್ದರು. ಆದರೆ ಭಾಷಾ ಅಲ್ಪಸಂಖ್ಯಾತ ಪ್ರದೇಶದ ಮುಖಂಡರಾಗಿರುವ ಸುಬ್ಬಯ್ಯ ರೈ ರವರಿಗೆ ಅಂತಿಮ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿರುವುದು ಪಕ್ಷದಲ್ಲಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನಬಹುದು.
ಈ ನಡುವೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕುನ್ನಿಲ್ ರವರನ್ನು ಅಧ್ಯಕ್ಷ ಸ್ಥಾನ ದಿಂದ ಕೆಳಗಿಳಿಸುವಂತೆ ೧೦ ಜಿಲ್ಲಾ ಸಮಿತಿ ಸದಸ್ಯರು ಕೆಪಿಸಿಸಿ ಯನ್ನು ಒತ್ತಾಯಿಸಿದ್ದಾರೆ . ಹಾಗೂ ಪಕ್ಷದ ಅತೃಪ್ತ ಬಣ ರಹಸ್ಯ ಸಭೆ ಸೇರಿ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದೆ. .