ಮಂಗಳೂರು,ಮಾ17(AZM):ಕಾಂಗ್ರೆಸ್ ನ ಹಿರಿಯ ನಾಯಕ ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರು, ಪ್ರಧಾನಿ ನರೇಂದ್ರ ಮೋದಿಯವರ ಪರವಹಿಸಿ ಮಾತನಾಡಿದ್ದಾರೆ ಎಂಬುವುದನ್ನು ನಾನು ನಂಬಲಾರೆ. ಅವರು ಯಾವಾಗಲೂ ಕಾಂಗ್ರೆಸ್ ಪರವಾಗಿಯೇ ಇರುತ್ತಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಜನಾರ್ದನ ಪೂಜಾರಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು, ಮೋದಿಯಂತಹ ನಾಯಕರು ಬೇಕು ಎಂದಿದ್ದರು. ಆದರೆ ಅವರು ಬಾಯಿತಪ್ಪಿ, ರಾಹುಲ್ ಗಾಂಧಿ ಎಂದು ಹೇಳುವ ಬದಲು, ಮೋದಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಬೇಕಾಗಿದ್ದ ಅವರು, ಬಿಜೆಪಿ ಪರವಾಗಿ ಮಾತನಾಡುತ್ತಾರೆ ಎಂಬುವುದನ್ನು ನಾನು ನಂಬಲಾರೆ ಎಂದರು. ಕುಮಾರ ಸ್ವಾಮಿ ಪುತ್ರ ನಿಖಿಲ್ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿರುವುದನ್ನು ಸ್ವಾಗತಿಸಿದ ಅವರು ಸಮ್ಮಿಶ್ರ ಸರಕಾರದಲ್ಲಿದ್ದುಕೊಂಡು ಕಾಂಗ್ರೆಸ್ ಪಕ್ಷವು ನಿಖಿಲ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತದೆ ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರಿಗೆ ಜನಾರ್ದನ ಪೂಜಾರಿಯವರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಬಿಜೆಪಿ ಅಭ್ಯರ್ಥಿಯನ್ನು ದ.ಕ. ಲೋಕಸಭಾ ಕ್ಷೇತ್ರದಲ್ಲಿ ನಿಲ್ಲಿಸುವುದು ಬೇಡ. ನಾವು ಈ ಬಾರಿ ಪೂಜಾರಿಯವರಿಗೆ ದ.ಕ. ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟು ನಿಲ್ಲಿಸುತ್ತೇವೆ. ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿ ಎಂದು ಟೀಕಿಸಿದರು.