ಮಂಗಳೂರು, ಮಾ 17(SM): ಕಾಂಗ್ರೆಸ್ ನ ಭಯದಿಂದಾಗಿ ಬಿಜೆಪಿ ಎಸ್ ಡಿಪಿಐಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರಲೂ ಬಹುದು ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಎಸ್ ಡಿಪಿಐನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ವಿರುದ್ಧ ಸೋಲಿನ ಭೀತಿಯಿಂದ ಎಸ್ ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅವರು ಒಪ್ಪಂದ ಮಾಡಿರಲೂಬಹುದು. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವ ಖಾದರ್ ಸ್ಪಷ್ಟಪಡಿಸಿದ್ದಾರೆ. ಸಚಿವರ ಈ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ.
ಇನ್ನು 2018ರ ಮೇ ತಿಂಗಳಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭ ಬಂಟ್ವಾಳ ಕ್ಷೇತ್ರದಲ್ಲಿ ಅಂತಿಮ ಗಳಿಗೆಯಲ್ಲಿ ಎಸ್ ಡಿಪಿ ಐನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಮೈತ್ರಿಯ ಬಳಿಕವೂ ಕಾಂಗ್ರೆಸ್ ಬಂಟ್ವಾಳ ಕ್ಷೇತ್ರದಲ್ಲಿ ಸೋಲನುಭವಿಸಿತ್ತು. ಇದೀಗ ಲೋಕಸಮರದಲ್ಲೂ ಎಸ್ ಡಿಪಿಐ ಪಕ್ಷ ಎದುರಾಗಿದ್ದು, ಲೋಕಸಭೆ ಚುನಾವಣೆಯನ್ನು ಯಾವರೀತಿ ಎದುರಿಸಲಿದೆ ಎನ್ನುವುದು ಸದ್ಯದ ಕುತೂಹಲ.