ಕುಂದಾಪುರ,ಮಾ 18 (MSP): ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಇನ್ನೂ ಅವಕಾಶ ಸಿಗದೇ ಇದ್ದರೂ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬರುತ್ತಿದ್ದು, ಕಂಡ್ಲೂರು ಸಮೀಪದ ವಾರಾಹಿ ಹೊಳೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಮಾರಾಟ ಮಾಡಲೆತ್ನಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಘಟನೆ ಮಾ.17ರ ಭಾನುವಾರ ಬೆಳಿಗ್ಗೆ ನಡೆದಿದೆ. ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಜೆ.ಎಮ್.ರಸ್ತೆ ವಾರಾಹಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಶ್ರೀಧರ ನಾಯ್ಕ್ ಎಂಬುವರಿಗೆ ದೊರೆತ ಮಾಹಿತಿ ಮೇರೆಗೆ ಭಾನುವಾರ ಬೆಳಿಗ್ಗೆ 6.5 ಗಂಟೆಗೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, ಎರಡು ಪಿಕ್ಅಪ್ ವಾಹನ ಒಂದು ಮಾರುತಿ ಓಮ್ನಿ ಕಾರು, ಮರಳು, ಮೊಬೈಲ್ಗಳು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಂಡ್ಲೂರು ಜೆ.ಎಮ್.ರಸ್ತೆ ನಿವಾಸಿ ಬಾಬಾಜಾನ್ ಪುತ್ರ ನಿಸಾರ್ ಅಹಮದ್ (32), ಕಾವ್ರಾಡಿ ಗ್ರಾಮ ಕಂಡ್ಲೂರು ಜೆ.ಎಮ್. ರಸ್ತೆ ನಿವಾಸಿ ಖಲೀಫಾ ಅಬ್ದುಲ್ ಖಾದರ್ ಪುತ್ರ ಖಲೀಫಾ ಖಾಲಿದ್(30), ಕಾವ್ರಾಡಿ ಗ್ರಾಮದ ಜನತಾ ಕಾಲೊನಿ ನಿವಾಸಿ ಖಲೀಫಾ ಮೊಹಮ್ಮದ್ ಸಾಹೇಬ್ ಪುತ್ರ ಖಲೀಫಾ ಖುರೇಶಿ (46), ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಶಾಡಗುಪ್ಪಿ ಪ್ಲಾಟ್ ನಿವಾಸಿ ಫಕೀರಪ್ಪ ಪುತ್ರ ವಿರೂಪಾಕ್ಷಪ್ಪ ಯಾನೆ ಹರೀಶ್(48) ಎಂಬುವರನ್ನು ಬಂಧಿಸಿದ್ದಾರೆ. ಖಲೀಫಾ ಖುರೇಶಿ ಸಿದ್ದಾಪುರ ಗ್ರಾಮದ ಜನ್ಸಾಲೆ ಮಸೀದಿ ಕಾಂಪ್ಲೆಕ್ಸ್ ಎಂಬಲ್ಲಿ ವಾಸವಿದ್ದಾರೆ. ಕಂಡ್ಲೂರಿನ ಕರಾಣಿ ಬಿಲಾಲ್, ಸಮೀರ್, ಅಫಾನ್ ಹಾಗೂ ಮುತಾಯಿಬ್ ಸ್ಥಳದಿಂದ ಪರಾರಿಯಾಗಿದ್ದಾರೆ.
ಕಾವ್ರಾಡಿ ಗ್ರಾಮ ಕಂಡ್ಲೂರು ಜೆ.ಎಮ್. ರಸ್ತೆ ಎಂಬಲ್ಲಿ ವಾರಾಹಿ ಹೊಳೆಯಿಂದ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು ಸ್ಥಳದಲ್ಲಿ ಕೃತ್ಯಕ್ಕೆ ಬಳಸಲಾಗಿರುವ ಇಪ್ಪತ್ತು ಸಾವಿರ ರೂಪಾಯಿಗಳ ಮೌಲ್ಯದ ನಾಲ್ಕು ಮೊಬೈಲ್ಗಳು, ಮರಳು ಸಾಗಾಟ ಮಾಡಿ ಮಾರಾಟ ಮಾಡಿ ಸಂಗ್ರಹಿಸಿರುವ ನಗದು ಮೂವತ್ತೇಳು ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಸ್ಥಳದಲ್ಲಿ ಚೀಲಗಳಲ್ಲಿ ಕಟ್ಟಿ ಸಂಗ್ರಹಿಸಿಟ್ಟಿದ್ದ ೩ ಯುನಿಟ್ಗಳಷ್ಟು ಮೌಲ್ಯದ ಸಾಮಾನ್ಯ ಮರಳನ್ನು, ಮತ್ತು ಎರಡು ಪಿಕ್ ಅಪ್ ವಾಹನ, ಓಮ್ನಿ, ಮರಳು ಸಂಗ್ರಹಕ್ಕೆ ಬಳಸಲಾಗಿರುವ ದೋಣಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.