ಕಾಸರಗೋಡು,ಮಾ 18 (MSP): ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕನ್ನೋತ್’ನ ರಂಜಿತ್ (29) ಎಂದು ಗುರುತಿಸಲಾಗಿದೆ. ಇದರಿಂದ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಒಂಭತ್ತಕ್ಕೇರಿದೆ.
ಈತ ಕೊಲೆ ನಡೆದ ದಿನ ಶರತ್ ಲಾಲ್ ಮತ್ತು ಕೃಪೇಶ್ ಬೈಕ್ ನಲ್ಲಿ ತೆರಳುತ್ತಿರುವುದಾಗಿ ಹಂತಕರಿಗೆ ಸುಳಿವು ನೀಡಿದ ಆರೋಪಿಯಾಗಿದ್ದಾನೆ. ಕೃಪೇಶ್ ಮತ್ತು ಶರತ್ ಲಾಲ್ ರಾತ್ರಿ ಬೈಕ್ ನಲ್ಲಿ ಮನೆಗೆ ಮರಳುತ್ತಿರುವ ಬಗ್ಗೆ ಹಂತಕರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ್ದನು. ಇದರಂತೆ ಹೊಂಚು ಹಾಕಿ ಕುಳಿತಿದ್ದ ಹಂತಕರು ಇಬ್ಬರನ್ನು ಕೊಲೆ ಮಾಡಿದ್ದರು.
ಸಿಪಿಎಂ ಸ್ಥಳೀಯ ಮುಖಂಡ ಎ. ಪೀತಾ೦ಬರನ್, ಏಚಿಲಡ್ಕದ ಸಜಿಜೋರ್ಜ್ , ಚಪ್ಪಾರಪಡವಿನ ಕೆ.ಎಂ ಸುರೇಶ್, ಕೆ. ಅನಿಲ್ ಕುಮಾರ್ , ಏಚಿಲಡ್ಕದ ಆಟೋ ಚಾಲಕ ಕೆ. ಅನಿಲ್ ಕುಮಾರ್, ಕುಂಡಂಗುಯಿ ಮೇಲಂಗೋಡ್ ನ ಎ.ಅಶ್ವಿನ್ , ಕಲ್ಯೊಟ್ ನ ಶ್ರೀರಾಗ್ , ಗಿಜಿನ್ ಮತ್ತು ಮುರಳಿ ಯನ್ನು ಈ ಹಿಂದೆ ಬಂಧಿಸಲಾಗಿತ್ತು.
ಕೃತ್ಯ ನಡೆದು ಇಂದಿಗೆ ಒಂದು ತಿಂಗಳಾಗಿದ್ದು , ಕೃತ್ಯಕ್ಕೆ ಸಂಚು ನಡೆಸಿದ್ದ ಆರೋಪಿಗಳನ್ನು ಬಂಧಿಸಲು ತನಿಖಾ ತಂಡಕ್ಕೆ ಸಾಧ್ಯವಾಗಿಲ್ಲ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣವನ್ನು ಸಿ ಬಿ ಐ ಗೆ ಒಪ್ಪಿಸಬೇಕೆಂದು ಕೊಲೆಗೀಡಾದವರ ಕುಟುಂಬಸ್ಥರು ಹಾಗೂ ಯುಡಿಎಫ್ ಒತ್ತಡ ತೀವ್ರಗೊಳಿಸಿದ್ದು ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ. ಫೆಬ್ರವರಿ 17 ರಂದು ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ತಂಡವು ಕೊಲೆಗೈದಿತ್ತು