ಮಂಗಳೂರು, ಮಾ 18(SM): ದ.ಕ. ಜಿಲ್ಲೆಯ ಕಾಂಗ್ರೆಸ್ ನಾಯಕರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಎದುರಿಸಲು ಸೂಕ್ತ ಅಸ್ತ್ರವಿಲ್ಲದೆ ಪರದಾಡುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ‘ಬ್ರಹ್ಮಾಂಡ ರಫೇಲ್ ಭ್ರಷ್ಟಾಚಾರ’ ಎಂಬ ಕೈಪಿಡಿಯೊಂದನ್ನು ಬಿಡುಗಡೆ ಮಾಡಿ ಮೋದಿ ಸರಕಾರ ರಫೇಲ್ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ. ಇದೊಂದು ಸುಳ್ಳಿನ ಕಂತೆಯಾಗಿದೆ ಎಂದರು.
ಸತ್ಯಾಂಶ ಗೊತ್ತಿದ್ದರೂ ಕೂಡ ಕಾಂಗ್ರೆಸ್ ನಾಯಕರು ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಇದು ರಾಹುಲ್ ಗಾಂಧಿ ನಿರ್ದೇಶನದ ಚಲನಚಿತ್ರವಾಗಿದೆ. ಇನ್ನು ಕಾಂಗ್ರೆಸ್ ನಾಯಕರು ಮೋದಿ ಸರಕಾರದ ವಿರುದ್ಧ ಎತ್ತಿದ ಪ್ರಶ್ನೆಗಳು ಕೂಡ ಅರ್ಥಹೀನವಾಗಿವೆ. ಜಿಲ್ಲೆಯ ಹಾಲಿ ಸಂಸದರ ವಿರುದ್ಧ ಆರೋಪ ಮಾಡಲು ಏನೂ ಸಿಗದೆ ಕಾಂಗ್ರೆಸ್ಸಿಗರು ಚಡಪಡಿಸುತ್ತಿದ್ದಾರೆ ಎಂದು ಜಿತೇಂದ್ರ ಕೊಟ್ಟಾರಿ ವ್ಯಂಗ್ಯವಾಡಿದ್ದಾರೆ.