ಬಂಟ್ವಾಳ,ಮಾ 19 (MSP): ಒಂದೆಡೆ ಬಿಸಿಲಿನ ತಾಪಕ್ಕೆ ಕುಡಿಯುವ ನೀರಿನ ಬರ ಉಂಟಾಗುವ ಲಕ್ಷಣಗಳು ಕಂಡುಬರುತ್ತಿದ್ದರೆ ಇತ್ತ ಬಿ.ಸಿ.ರೋಡ್ ನ ಸರ್ವೀಸ್ ರಸ್ತೆಯಲ್ಲಿ ಮಾ.19ರ ಸೋಮವಾರ ಕುಡಿಯುವ ನೀರಿನ ಪೈಪ್ ಹೊಡೆದು ಪರಿಣಾಮ ಕೃತಕ ನೆರೆ ಉಂಟಾಗಿ ನೀರು ಪಕ್ಕದ ಅಂಗಡಿಗೂ ನುಗ್ಗಿದೆ ಸಂಚಾರವು ಅಸ್ತವ್ಯಸ್ತವಾಗಿ ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕಿದ ಪ್ರಸಂಗ ನಡೆದಿದೆ.
ಕಳೆದ ವಾರ ಸರ್ವಿಸ್ ರಸ್ತೆಯಲ್ಲಿ ಕುಡಿಯವ ನೀರಿನ ಪೈಪ್ ಲೈನ್ ಕೆಲಸವನ್ನು ಪುರಸಭೆಯವರು ಕೈಗೊಂಡಿತ್ತು. ಇದನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನಲೆಯಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ಕುಡಿಯುವ ನೀರಿನ ಪೈಪ್ ಸೋರಿಕೆಯಾಗಿ ಸರ್ವೀಸ್ ರಸ್ತೆಯಿಡಿ ನೀರು ತುಂಬಿತು.ಒಂದೆಡೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕೆಲ ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಇನ್ನೊಂದೆಡೆ ನೀರು ಸರಾಗವಾಗಿ ಸೋರಿಕೆಯಾಗುತ್ತಿದ್ದರೂ, ಪುರಸಭೆ ಇದರ ಹತ್ತಿರ ಸುಳಿದಿಲ್ಲ, ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದ ಕಾರಣ ಕೇಳುವವರೇ ಇಲ್ಲದಂತಾಗಿದ್ದು, ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದ್ದರಿಂದ ಯಾವುದೇ ಕೆಲಸ ಕಾರ್ಯಗಳು ತಕ್ಷಣ ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
ನೀರು ಸೋರಿಕೆಯ ಬಗ್ಗೆ ಮಾಜಿ ಪುರಸಭಾ ಸದಸ್ಯೆ ಯಶೋಧ ಅವರು ಪುರಸಭೆಗೆ ಮೌಖಿಕವಾಗಿ ಮಾಹಿತಿ ನೀಡಿದರೂ, ಪುರಸಭೆಯ ಅಧಿಕಾರಿಗಳು ತಾಸುಗಟ್ಟಲೆ ಸ್ಥಳಕ್ಕೆ ಬರಲೇ ಇಲ್ಲ, ಇತ್ತ ನೀರು ಪೋಲಾಗುತ್ತಲೇ ಇತ್ತು.