ಉಡುಪಿ, ಮಾ 19 (MSP): ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಯಾವಾಗ ಮೈತ್ರಿ ಸರ್ಕಾರದ ಒಪ್ಪಂದದ ಪ್ರಕಾರ ಜೆಡಿಎಸ್ ಪಾಲಾಯಿತೋ ಅಂದಿನಿಂದ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡತೊಡಗಿತ್ತು. ಆದರೆ ಅದೆಲ್ಲವೂ ಸದ್ಯ ಶಮನವಾಗುವ ಲಕ್ಷಣಗಳು ಗೋಚರಿಸತೊಡಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಲೋಕಸಮರದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದ್ದು, ಮೈತ್ರಿ ಪಕ್ಷಗಳ ಒಪ್ಪಂದದಂತೆ ಜೆಡಿಎಸ್ ಚಿಹ್ನೆಯಿಂದಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದೆ. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯೂ ಪ್ರಮೋದ್ ಮಧ್ವರಾಜ್ ಕಣಕ್ಕಿಳಿಸಲು ಗ್ರೀನ್ ಸಿಗ್ನಲ್ ನೀಡಿದ್ದು, ಅಂತಿಮ ನಿರ್ಧಾರ ಪ್ರಕಟಿಸಲಷ್ಟೇ ಬಾಕಿ ಇದೆ.
ಕೋಮುವಾದಿ ಶಕ್ತಿ ಮಣಿಸಲು ಲೆಕ್ಕಾಚಾರ ಹಾಕಿಕೊಂಡಿರುವ ಮೈತ್ರಿ ಪಕ್ಷಗಳು ಇದಕ್ಕಾಗಿ ರಾಜಕೀಯ ರಣತಂತ್ರ ಹೂಡಿದ್ದು, ಚಿಕ್ಕಮಗಳೂರಿನಲ್ಲಿ ಜೆಡಿಎಸ್, ಉಡುಪಿಯಲ್ಲಿ ಕಾಂಗ್ರೆಸ್ ಪ್ರಬಲವಾಗಿರುವ ಕಾರಣಕ್ಕೆ.ಮೈತ್ರಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲುವಿನ ಸಾದ್ಯತೆ ಹೆಚ್ಚಾಗಿರುತ್ತದೆ ಎಂದು ಮೊಗವೀರ ಸಮುದಾಯದ ನಾಯಕರಾದ ಹಾಗೂ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರನ್ನು ಕಣಕ್ಕಿಳಿಸಲಿದೆ.