ಕಾಪು, ಮಾ 19(SM): ಕರ್ಕಶ ಶಬ್ಧದಿಂದ ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿದ್ದ ಬುಲೆಟ್ ಬೈಕ್ ಗಳ ವಿರುದ್ಧ ಕಾಪುವಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರಿಸರದಲ್ಲಿ ಶಬ್ಧ ಮಾಲಿನ್ಯವನ್ನುಂಟು ಮಾಡುವ ಬುಲೆಟ್ ಗಳಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.
ಹೆಚ್ಚುವರಿ ಸೈಲೆನ್ಸರ್ ಅಳವಡಿಸಿಕೊಂಡು ಕರ್ಕಶ ಶಬ್ದದೊಂದಿಗೆ ಓಡಾಡುತ್ತಿದ್ದ ಬುಲೆಟ್ ಗಳನ್ನು ಪತ್ತೆ ಹಚ್ಚಿ ಸವಾರರಿಗೆ ದಂಡ ವಿಧಿಸಲಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಪರವಾನಿಗೆ ಇಲ್ಲದೆ ಹೆಚ್ಚುವರಿ ಸೈಲೆನ್ಸರ್ ಅಳವಡಿಸಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ 6 ಬುಲೆಟ್ ಗಳನ್ನು ಪತ್ತೆ ಹಚ್ಚಿ ಪೊಲೀಸರು ದಂಡ ವಿಧಿಸಿದ್ದಾರೆ.
ಕಾಪು ಠಾಣಾಧಿಕಾರಿ ನವೀನ್ ನಾಯಕ್ ಅವರು ಬುಲೆಟ್ ಸವಾರರನ್ನು ಠಾಣೆಗೆ ಕರೆಸಿ ಮೆಕಾನಿಕ್ ಮೂಲಕ ಸೈಲೆನ್ಸರ್ ಗಳನ್ನು ಕಿತ್ತು ತೆಗೆದು, ಸಾಮಾನ್ಯ ಸೈಲೆನ್ಸರ್ ಗಳನ್ನು ಅಳವಡಿಸಿ ಎಚ್ಚರಿಕೆ ನೀಡಲಾಯಿತು. ಆಧುನಿಕ ಮಾದರಿಯ ರಾಕೆಟ್ ಸೈಲೆನ್ಸರ್ ಗಳನ್ನು ಬುಲೆಟ್ ಗಳಿಗೆ ಅಳವಡಿಸಿಕೊಂಡು ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ ಹಿನ್ನೆಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕಾಪು ಠಾಣಾಧಿಕಾರಿ ನವೀನ ನಾಯ್ಕ್ ತಿಳಿಸಿದ್ದಾರೆ.