ಮಂಗಳೂರು, ನ 4: ಜಿಲ್ಲೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಕರಾಟೆಯ ರಾಷ್ಟ್ರೀಯ ಮುಕ್ತ ಚಾಂಪಿಯನ್ ಶಿಪ್ ನಗರದ ನೆಹರೂ ಮೈದಾನದಲ್ಲಿ ನಡೆದಿದ್ದು, ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಐತಿಹಾಸಿಕ ಟೂರ್ನಿಗೆ ಸಾವಿರಾರು ಜನ ಸಾಕ್ಷಿಯಾಗಿದ್ದು, ರಾಜ್ಯದ ವೇಗದ ಚಿತ್ರ ಬಿಡಿಸುವ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಬರಿ ಗಾಣಿಗ ಅವರ ಚಿತ್ರ ಎಲ್ಲರ ಗಮನ ಸೆಳೆಯಿತು.
ಕಡಲನಗರಿಯಲ್ಲಿ ನಡೆದ ಕರಾಟೆ ಹಬ್ಬಕ್ಕೆ ಸಿಎಂ ಚಾಲನೆ ಕೊಟ್ಟು ಇನ್ನೇನು ಅಲ್ಲಿಂದ ತೆರಳಬೇಕು ಅನ್ನುವಷ್ಟರಲ್ಲಿ ಶಬರಿ ಗಾಣಿಗ ಅವರ ಕುಂಚದಲ್ಲಿ ಅರಳಿದ ಕಲಾಕೃತಿ ಸಿಎಂ ಕಣ್ಣಿಗೆ ಬಿತ್ತು. ತಕ್ಷಣ ಕಾರ್ಯಕ್ರಮ ಮುಗಿಸಿ ಹಿಂದಿರುಗಿದ್ದ ಸಿಎಂ ಮತ್ತೇ ಹಿಂದೆ ಬಂದು ಶಬರಿ ಗಾಣಿಗ ಅವರ ಚಿತ್ರಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕದ ಅತಿ ವೇಗದ ಚಿತ್ರಗಾರ್ತಿ ಶಬರಿ ಗಾಣಿಗ
ಮನಸ್ಸಿನಲ್ಲಿ ಯೋಚಿಸುವ ವಿಷಯಗಳಿಗೆ ಕುಂಚದ ಮೂಲಕ ರೂಪ ಕೊಡುವ ಅದ್ಭುತ ಪ್ರತಿಭೆ ಈಕೆಯದು. ಬಣ್ಣಗಳ ಓಕುಳಿಯ ಸೊಬಗನ್ನು ಮೀರಿಸುವಂತಹ ಅತ್ಯಧ್ಭುತವಾದ ಮೈ ನವಿರೇಳಿಸುವ ಚಿತ್ರಗಳು ಈಕೆಯ ಕುಂಚದಿಂದ ಮೂಡಿ ಬರುತ್ತದೆ. ರಂಗು ರಂಗಾದ ಚಿತ್ರಗಳ ಕಲಾ ವೈಭವವನ್ನು ಕ್ಷಣ ಮಾತ್ರದಲ್ಲೇ ಬಿಡಿಸಿ ನೆರೆದ ಎಲ್ಲರ ಮನಸೂರೆಗೊಳಿಸುವ ಈ ಪ್ರತಿಭೆಯ ಹೆಸರು ಶಬರಿ ಗಾಣಿಗ.
ಕೆಪಿಟಿ ವ್ಯಾಸ ನಗರದ ಬಿ. ಯೋಗಿಶ್ಕುಮಾರ್ ಗಾಣಿಗ ಮತ್ತು ಎಂ. ಶಶಿಕಲಾ ದಂಪತಿ ಪುತ್ರಿಯಾಗಿರುವ ಈಕೆಗೆ ಎಳೆಯ ವಯಸ್ಸಿನಲ್ಲಿಯೇ ಕುಂಚದೊಂದಿಗೆ ಸರಸವಿತ್ತು. ಅದೇ ಕಲಾಭಿರುಚಿ ಇವತ್ತು ಶಬರಿಯನ್ನು ರಾಜ್ಯದ ವೇಗದ ಚಿತ್ರ ಬಿಡಿಸುವ ಮಹಿಳೆ ಎಂಬ ಹೆಗ್ಗಳಿಕೆ ಪಡೆದುಕೊಳ್ಳುವಂತೆ ಮಾಡಿದೆ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಅನ್ನೋ ಮಾತಿನಂತೆ ಶಬರಿಯ ಈ ಪ್ರತಿಭೆಗೆ ನೀರೆರೆದು ಪೋಷಿಸಿದ್ದು ಈಕೆಯ ತಾಯಿ. ಬಾಲ್ಯದಲ್ಲಿ ತಾಯಿ ಚಿತ್ರ ಬಿಡಿಸೊದನ್ನು ನೋಡಿ ಅನುಕರಣೆ ಮಾಡಿಕೊಂಡ ಈಕೆ ಇಂದು ಅಪರೂಪದ ಆಕರ್ಷಕ ಚಿತ್ರಗಳನ್ನು ಕ್ಯಾನ್ವಸ್ನಲ್ಲಿ ಬಿಡಿಸಿ ರಾಜ್ಯದಲ್ಲಿ ಜನಪ್ರಿಯ ಕಲಾವಿದೆ ಎಂಬ ಕೀರ್ತಿ ಮುಡಿಗೇರಿಸಿಕೊಂಡಿದ್ದಾರೆ.
ಎಲ್.ಕೆ.ಜಿಯಲ್ಲಿರುವಾಗ ಶಬರಿ ರಾಷ್ಟ್ರ ಧ್ವಜದ ಚಿತ್ರ ಬರೆದು ಮೊದಲ ಬಹುಮಾನ ಪಡೆದಿದ್ದಳು. ಹೀಗೆ ಬೆಳೆಯುತ್ತಾ ಬಂದ ಶಬರಿ ಏಳನೇ ತರಗತಿಯಲ್ಲಿರುವಾಗ ಗುರುಗಳಾದ ಶಮೀರ್ ಆಲಿ ಅವರಿಂದ ಚಿತ್ರಕಲೆಯ ಬಗ್ಗೆ ಹೆಚ್ಚಿನ ತರಬೇತಿ ಪಡೆದುಕೊಂಡರು. ಅಂದಿನಿಂದ ಚಿತ್ರಕಲೆಯಲ್ಲಿ ಮತ್ತಷ್ಟೂ ಆಸಕ್ತಿ ಬೆಳೆಸಿಕೊಂಡ ಶಬರಿ ಇಂದು ಬಣ್ಣದ ಕುಂಚ ಹಿಡಿದು ಕ್ಯಾನ್ವಾಸ್ನಲ್ಲಿ ಕ್ಷಣದಲ್ಲಿ ಚಿತ್ರ ಬಡಿಸಿ ಕಲೆಗೆ ಜೀವ ತುಂಬುತ್ತಿದ್ದಾರೆ. ಸದ್ಯ ಮಂಗಳೂರು ಶ್ರೀದೇವಿ ಕಾಲೇಜಿನಲ್ಲಿ ಎಂಸಿಎ ಓದುತ್ತಿರುವ ಈಕೆಗೆ ಇಂಡಿಯಾ ಗಾಟ್ ಟ್ಯಾಂಲೆಂಟ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸುವ ಕನಸಿದೆ. ಜೊತೆಗೆ ವರ್ಲ್ಡ್ ಆರ್ಟ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಅನ್ನೋ ಛಲವೂ ಇದೆ.
ಚಿತ್ರಕಲೆಯ ಬೇರೆ ಬೇರೆ ಕಲಾ ಪ್ರಕಾರಗಳಾದ ಆಯಿಲ್ ಕಲರ್, ವಾಟರ್ ಕಲರ್, ಆಯಿಲ್ ಪೈಂಟಿಂಗ್, ಸೆರೆಮಿಕ್ ಪೈಂಟಿಂಗ್, ಗ್ಲೋ ಆರ್ಟ್, ಗ್ಲಾಸ್ ಪೈಂಟಿಂಗ್ಗಳನ್ನು ಕರಗತ ಮಾಡಿಕೊಂಡಿರುವ ಇವರು 300ಕ್ಕೂ ಮಿಕ್ಕಿ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಅಬ್ದುಲ್ ಕಲಾಂ, ಡಾ.ರಾಜ್ಕುಮಾರ್, ಡಾ.ಡಿ.ವೀರೇಂದ್ರ ಹೆಗ್ಗಡೆ, ಚಿತ್ರನಟಿ ಕಲ್ಪನಾ, ಮದರ್ ತೆರೆಸಾ, ವಿರಾಟ್ ಕೊಹ್ಲಿ ಹೀಗೆ ಅನೇಕ ಗಣ್ಯರ ಕಷ್ಟದ ಚಿತ್ರಗಳನ್ನು ಇಷ್ಟದ ಲೇಪನ ಹಿಡಿದು ಕ್ಷಣ ಮಾತ್ರದಲ್ಲೇ ಮೂಡಿಸಿ ಎಲ್ಲರನ್ನು ಬೆರಗಾಗುವಂತೆ ಮಾಡುತ್ತಾರೆ.
ಚಿತ್ರಕಲೆಯಲ್ಲಿ ಬೇರೆ ಬೇರೆ ವೇದಿಕೆಗಳಲ್ಲಿ ಸುಮಾರು 2000ಕ್ಕೂ ಮಿಕ್ಕಿ ಪ್ರದರ್ಶನ ನೀಡಿರುವ ಇವರು ೫೦೦ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನ ನೀಡಿ ಮನೆಮಾತಾಗಿದ್ದಾರೆ. ಚಿತ್ರಕಲೆ, ಸಂಗೀತ, ಕ್ರಾಫ್ಟ್, ಡ್ಯಾನ್ಸ್, ಶಿಕ್ಷಣ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು 1500ಕ್ಕೂ ಹೆಚ್ಚು ಬಹುಮಾನ ಪಡೆದಿರುವ ಇವರು ಕತಕ್ ಮತ್ತು ಭರತನಾಟ್ಯ ನೃತ್ಯಗಾರ್ತಿಯು ಹೌದು. ಇಷ್ಟೇ ಅಲ್ಲದೇ ಕೀಬೋರ್ಡ್ ಮತ್ತು ಗಿಟಾರ್ ನುಡಿಸುವುದರಲ್ಲಿಯೂ ಈಕೆ ಜಾಣೆ.
ಶಬರಿ ಅವರಿಗೆ ಒಲಿದಿರುವ ಮತ್ತೊಂದು ಪ್ರತಿಭೆ ಸಂಗೀತ.. ಉತ್ತಮ ಕಂಠಸಿರಿಯನ್ನು ಹೊಂದಿರುವ ಇವರು ಅನೇಕ ವೇದಿಕೆಗಳಲ್ಲಿ ಹಾಡುವುದರಲ್ಲಿಯೂ ಪ್ರವೀಣೆ. ಅನೇಕ ವೇದಿಕೆಗಳಲ್ಲಿ ಕಂಠದಾನ ಮಾಡಿರುವ ಇವರು ತುಳು ಸೂಂಬೆ, ಕುಡ್ಲಕೆಫೆ ಚಿತ್ರಕ್ಕೆ ವಾಯ್ಸ್ ಡಬ್ಬಿಂಗ್ ಮಾಡಿದ್ದಾರೆ. ಡೊಂಬರಾಟ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಧ್ವನಿಗೂಡಿಸಿದ್ದಾರೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಕೋಟಿ ಚೆನ್ನಯ ಧಾರಾವಾಯಿಯಲ್ಲಿ ಹಾಡಿ ಭೇಷ್ ಅನಿಸಿಕೊಂಡಿದ್ದಾರೆ. ಹಿನ್ನೆಲೆ ಗಾಯಕಿಯಾಗಿ ಧ್ವನಿ ನೀಡಿರುವ ಉಮಿಲ್ ಮುಂದಿನ ದಿನಗಳಲ್ಲಿ ತೆರೆ ಕಾಣಲಿದೆ.
ಚಿತ್ರಕಲೆ ಸೇರಿದಂತೆ ಬೇರೆಬೇರೆ ಕಲಾಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಸೈ ಎನಿಸಿಕೊಂಡಿರುವ ಶಬರಿ ಗಾಣಿಗ ಅವರಿಗೆ ರಾಜ್ಯ ಕಲಾಶ್ರೀ ಅವಾರ್ಡ್, ಸಿದ್ಧಿಶ್ರೀ, ಯಂಗ್ ಅಚೀವರ್, ಮಲ್ಲಿಕಾ ಅವಾರ್ಡ್, ಕನ್ನಡ ರಾಜ್ಯೋತ್ಸವ ಸಾಧಕಿ ಅವಾರ್ಡ್, ಸುವರ್ಣ ಸಾಧಕಿ ಅವಾರ್ಡ್ ಸಹಿತ ಐನೂರಕ್ಕೂ ಅಧಿಕ ಗೌರವಗಳು ಸಂದಿದೆ.