ಬಂಟ್ವಾಳ, ಮಾ 20(SM): ಶಾಲೆಯ ಮುಂದೆ ಸ್ವಾಗತ ಕಮಾನು, ವಿದ್ಯಾರ್ಥಿಗಳನ್ನು ಆಕರ್ಷಿಸಲು ತೋರಣಗಳ ಸಾಲು, ಹಾರಾಡುತಿದೆ ಬಣ್ಣಬಣ್ಣದ ಬಾವುಟಗಳು. ಇದೇನು ಶಾಲಾ ವಾರ್ಷಿಕೋತ್ಸವವೇ ಎಂದು ಚಕಿತರಾಗಬೇಡಿ. ರಾಜ್ಯಾದ್ಯಂತ ಮಾರ್ಚ್ 21ರ ಗುರುವಾರದಿಂದ ಆರಂಭಗೊಳ್ಳಲಿರುವ 2018-19ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕ ಸಮೂಹ ತಯಾರಾಗಿರುವ ಬಗೆ.
ಪರೀಕ್ಷೆಗಳು ಭಯಮುಕ್ತವಾಗಿರಬೇಕು ಎನ್ನುವ ಕಾರಣಕ್ಕೆ ಬಂಟ್ವಾಳ ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣಗೊಳಿಸಲಾಗಿದೆ. ಈ ಮೂಲಕ ಪರೀಕ್ಷಾ ಕೇಂದ್ರಗಳು ಹೊಸ ಇತಿಹಾಸ ಬರೆಯಲು ಸಜ್ಜಾಗಿವೆ. ಎಲ್ಲಾ ಪರೀಕ್ಷೆಗಳನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸೂಚನೆಯಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಪರೀಕ್ಷಾ ಕೇಂದ್ರಗಳಲ್ಲಿ ಹಬ್ಬದ ಕಳೆ ಮೂಡಿವೆ.
ಮಕ್ಕಳನ್ನು ಹಬ್ಬದ ಮಾದರಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಸ್ವಾಗತಿಸಬೇಕು, ಆ ಮೂಲಕ ಅವರಲ್ಲಿರುವ ಭಯವನ್ನು ದೂರಮಾಡಬೇಕೆನ್ನುವುದು ಇಲಾಖೆಯ ಆಶಯವಾಗಿದ್ದು ತಾಲೂಕಿನ ಮೊಂಟೆಪದವು, ವಗ್ಗ ಸಹಿತ ಬಹುತೇಕ ಪರೀಕ್ಷಾ ಕೇಂದ್ರಗಳು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಇನ್ನು ಬಂಟ್ವಾಳ ತಾಲೂಕಿನಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು5625 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತೀ ಕೇಂದ್ರಗಳಿಗೊಬ್ಬರಂತೆ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿದ್ದು, 9 ಮಂದಿ ಉಪಮುಖ್ಯ ಅಧೀಕ್ಷಕರಿದ್ದಾರೆ. 17 ಕಸ್ಟೋಡಿಯನ್ ಹಾಗೂ 350 ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸ್ಥಾನಿಕ ದಳದಲ್ಲಿ 25 ಮಂದಿಯಿದ್ದು, ವಿವಿಧ ತಂಡಗಳಲ್ಲಿ ತಾಲೂಕಿನಾದ್ಯಂತ ನಿಗಾವಹಿಸಲಿದ್ದಾರೆ.