ಮಂಗಳೂರು, ಮಾ 20(SM): ಮಂಗಳೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಅವರ ವರ್ಗಾವಣೆ ಬಳಿಕ ಅಧಿಕಾರ ಸ್ವೀಕರಿಸಿಕೊಂಡಿದ್ದ ಯಶವಂತ ಕುಮಾರ್ ಕಡತಗಳ ವಿಲೇವಾರಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಇದೀಗ ಇವರನ್ನು ವಜಾಗೊಳಿಸಲಾಗಿದೆ.
ಹಾಸನದಿಂದ ಮಂಗಳೂರಿಗೆ ವರ್ಗಾವಣೆಗೊಂಡು ಬಂದಿದ್ದ ಯಶವಂತಕುಮಾರ್ ಮಂಗಳೂರಿನಲ್ಲಿದ್ದುಕೊಂಡೇ ಹಾಸನದ ಕಡತಗಳನ್ನು ಮಂಗಳೂರಿಗೆ ತರಿಸಿಕೊಂಡು ವಿಲೇವಾರಿ ಮಾಡುತ್ತಿದ್ದರು. ಆದರೆ, ಇದು ಕಾನೂನು ಬಾಹಿರ ಕ್ರಮವಾಗಿದೆ. ಮಾಹಿತಿ ತಿಳಿದು ಮಂಗಳೂರಿನ ಕಚೇರಿಗೆ ಕಳೆದ ಶುಕ್ರವಾರ ದಾಳಿ ನಡೆಸಿದ ಬೆಂಗಳೂರು ಕೇಂದ್ರ ವಿಜಿಲೆನ್ಸ್ ಅಧಿಕಾರಿಗಳ ತಂಡ, ಹಾಸನ ವಿಭಾಗದ ಕಡತಗಳನ್ನು ವಶಪಡಿಸಿಕೊಂಡಿದ್ದರು.
ಕೆಎಸ್ಆರ್ಟಿಸಿ ವಿಜಿಲೆನ್ಸ್ ಹಾಗೂ ಭದ್ರತಾ ವಿಭಾಗದ ಮುಖ್ಯ ಅಧಿಕಾರಿ ಲಿಂಗರಾಜು ನಿರ್ದೇಶನದಲ್ಲಿ ಅಧಿಕಾರಿ ಲಕ್ಷ್ಮಣ್ ಹಾಗೂ ಮೈಸೂರು ವಿಭಾಗದ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದರು. ಬಳಿಕ ತನಿಖೆ ನಡೆಸಿದ ವಿಜಿಲೆನ್ಸ್ ತಂಡ ಅಧಿಕಾರಿ ಯಶವಂತಕುಮಾರ್ ಅವರನ್ನು ವಜಾ ಮಾಡಿದೆ.
ಇದೇ ವೇಳೆ ಇವರಿಗೆ ಸಹಾಯಕನಾಗಿ ಕೆಲಸ ಮಾಡಿದ್ದ ಇನ್ನೊಬ್ಬನನ್ನು ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಕೆಎಸ್ ಆರ್ ಟಿಸಿಯ ನೂತನ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜೈಶಾಂತ್ಗೆ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದು ತಿಳಿದು ಬಂದಿದೆ.