ಮಂಗಳೂರು,ಮಾ 21(MSP): ಪ್ರಾಕೃತಿಕ ವಿಕೋಪದಿಂದ ಕೃಷಿಯಲ್ಲಿ ನಷ್ಟ ಅನುಭವಿಸಿದ ರೈತರೊಬ್ಬರು ಪರಿಹಾರಕ್ಕಾಗಿ ಇಲಾಖೆಗೆ ಕೈ ಚಾಚಿ, ಕಂದಾಯ ಇಲಾಖೆ ಬೇಜವಾಬ್ದಾರಿಯಿಂದ ಕೈಸುಟ್ಟುಕೊಂಡ ಘಟನೆ ನಡೆದಿದೆ. ಕೈರಂಗಳ ಕೊಪ್ಪಳ ನಿವಾಸಿ ಕೃಷಿಕ ಭಾಸ್ಕರ್ ಅವರ ತೋಟದಲ್ಲಿ ಗಾಳಿ ಮಳೆಯಿಂದ ಅವರ ೨೫ ಅಡಿಕೆ ಮರಗಳು , ಹಾಗೂ 2 ತೆಂಗಿನ ಮರಗಳು ಧರಾಶಾಯಿಯಾಗಿದ್ದವು. ಇದಲ್ಲದೆ ದನದ ಕೊಟ್ಟಿಗೆಯೂ ಭಾಗಶಃ ಹಾನಿಗೀಡಾಗಿತ್ತು. ಈ ಕುರಿತು ಸ್ಥಳೀಯ ಗ್ರಾಮಕರಣಿಕರಲ್ಲಿ ದೂರು ದಾಖಲಿಸಿದ್ದರು. ಪೋಟೋ ತೆಗೆದು ಅದನ್ನು ದೂರಿನೊಂದಿಗೆ ಲಗತ್ತಿಸಿ , ಇದಕ್ಕಾಗಿ 300 ರೂ.ಖರ್ಚು ಮಾಡಿದ್ದರು. ಆದರೆ ಕಂದಾಯ ಇಲಾಖೆ ನೀಡಿದ 800 ರೂ. ಪರಿಹಾರ ಮೊತ್ತದ ಚೆಕ್ ಎರಡು ಬಾರಿ ಬ್ಯಾಂಕ್ ನಲ್ಲಿ ಬೌನ್ಸ್ ಆಗಿ ರೈತ 472 ರೂ. ದಂಡ ಪಾವತಿಸುವಂತಾಗಿದೆ.
ನಷ್ಟದ ಪರಿಹಾರ ರೂಪವಾಗಿ ತಿಂಗಳ ಹಿಂದೆ ಅವರಿಗೆ ಕಂದಾಯ ಇಲಾಖೆಯಿಂದ 800 ರೂ. ಪರಿಹಾರ ಮೊತ್ತದ ಚೆಕ್ ಬಂದಿತ್ತು. ಬಿ.ಸಿ ರೋಡಿನ ಅಜ್ಜಿಬೆಟ್ಟು ವಿಭಾಗದ ಎಚ್ ಡಿ ಎಫ್ ಸಿ ಬ್ಯಾಂಕಿನ ಚೆಕ್ ಆಗಿತ್ತು. ಖಾತೆಗೆ ನಗದು ಜಮಾ ಆಗುವಂತೆ ಚೆಕ್ ಅನ್ನು ಮೊದಲ ಬಾರಿಗೆ ರೈತ ಹಾಕಿದಾಗ ತಹಶೀಲ್ದಾರ್ ಸಹಿ ಸರಿಯಾಗಿಲ್ಲ ಎಂದು ಹೇಳಿದ ಬ್ಯಾಂಕ್ ರೈತನ ಖಾತೆಯಿಂದ 236 ರೂ ದಂಡವನ್ನು ಕಡಿತ ಮಾಡಿತ್ತು. ಆ ಚೆಕ್ ಹಿಡಿದುಕೊಂಡು ನಗರದ ಮಿನಿ ವಿಧಾನ್ಸುಅಧಕ್ಕೆ ತೆರಳಿದಾಗ ಅಲ್ಲಿನ ಸಿಬ್ಬಂದಿ ತಹಶೀಲ್ದಾರರ ಬದಲಾವಣೆಯಿಂದಾಗಿ ಸಮಸ್ಯೆಯಾಗಿದೆ ಎಂದು ಹೇಳಿ ಬೇರೆ ಚೆಕ್ ನೀಡಿದ್ದರು. ಮತ್ತೆ ಬ್ಯಾಂಕಿನ ಚೆಕ್ ಹಾಕಿದಾಗ ನಗದು ಇಲ್ಲದೆ ಬೌನ್ಸ್ ಆಗಿದ್ದು, ಮತ್ತೆ 236 ರೂ. ದಂಡ ವಿಧಿಸಲಾಗಿತ್ತು. ಕೇವಲ 800 ರೂ. ಬಾಸ್ಕರ್ ಒಟ್ಟು 472 ರೂ ಕಳೆದುಕೊಂಡಿದ್ದು ಅರ್ಜಿ ಸಲ್ಲಿಕೆ ಖರ್ಚು ಸೇರಿ 776 ರೂ. ಕಳೆದುಕೊಂಡಂತಾಗಿದೆ. ಕೊನೆಗೆ ರಗಳೆಯೇ ಬೇಡವೆಂದು ಚೆಕ್ ನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.