ಉಡುಪಿ,ಮಾ 21(MSP): ಕೇಂದ್ರ ಚುನಾವಣಾ ಆಯೋಗದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುವ ಭಾರತೀಯ ಕಂದಾಯ ಸೇವೆಯ ಅಧಿಕಾರಿ ಮಲ್ಲಿಕಾರ್ಜುನ ಉತ್ತರೆ ಅವರು ಮಾ.21ರ ಬುಧವಾರ ಉಡುಪಿಗೆ ಆಗಮಿಸಿ ಚುನಾವಣಾ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಅಥವಾ ಯಾವುದೇ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿಗೆ ಕಾಯದೆಯೇ ಚುನಾವಣಾ ಸಿಬ್ಬಂದಿಗಳು ತಮ್ಮ ಗಮನಕ್ಕೆ ಬಂದ ತಕ್ಷಣವೇ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಚುನಾವಣಾ ಪ್ರಚಾರದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕು. ಪ್ರಮುಖವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಚಟುವಟಿಕೆಗಳು ನಡೆಯದಂತೆ ಚುನಾವಣಾ ಕಾರ್ಯಗಳಿಗೆ ನಿಯೋಜಿತವಾದ ವಿವಿಧ ತಂಡಗಳು ಗಮನಹರಿಸಬೇಕು ಎಂದು ಅವರು ತಿಳಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎರಡು ಜಿಲ್ಲೆಗಳಲ್ಲಿ ಹರಡಿಕೊಂಡಿರುವುದರಿಂದ ಎರಡೂ ಜಿಲ್ಲೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಹಣ ಸಾಗಾಟ ಸೇರಿದಂತೆ ಅಕ್ರಮ ಚಟುವಟಿಕೆಗಳ ಮಾಹಿತಿಯನ್ನು ಪರಸ್ಪರರು ಹಂಚಿಕೊಂಡು ಅವುಗಳನ್ನು ತಡೆಗಟ್ಟಬೇಕು. ದಿನದ 24 ಗಂಟೆಗಳ ಕಾಲವೂ ಈ ವಿಷಯದಲ್ಲಿ ಯಾವುದೇ ಲೋಪಕ್ಕೆ ಆಸ್ಪದವಾಗದಂತೆ ನಿಗಾ ಇಡಲು ವೆಚ್ಚ ವೀಕ್ಷಕರು ಸೂಚಿಸಿದರು.
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ವೆಚ್ಚ ವೀಕ್ಷಕರಿಗೆ ಲೋಕಸಭಾ ಕ್ಷೇತ್ರದ ಮಾಹಿತಿಗಳನ್ನು ನೀಡಿ, ಕ್ಷೇತ್ರದ ಎಲ್ಲಾ 1837 ಮತಗಟ್ಟೆಗಳಲ್ಲೂ ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಚುನಾವಣಾ ತಹಶೀಲ್ದಾರ್ ಮುಹಮ್ಮದ್ ಇಸಾಕ್, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಬಳಿಕ ವೆಚ್ಚ ವೀಕ್ಷಕರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವ ಮಾಧ್ಯಮ ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ) ಕೇಂದ್ರ, ಸಿ ವಿಜಿಲ್ ದೂರು ಕೋಶ, ಕಂಟ್ರೋಲ್ ರೂಂ ಮತ್ತಿತರ ಕಡೆ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.