ಬಂಟ್ವಾಳ, ನ 4: ಕಲ್ಲಡ್ಕ ಶ್ರೀರಾಮ ಶಾಲೆಯ ಮಕ್ಕಳು ಗದ್ದೆಯಲ್ಲಿ ತಾವೇ ಭತ್ತ ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿ ನಡೆಸುವ ಮೂಲಕ ಅನ್ನ ಕಿತ್ತುಕೊಂಡ ಸರ್ಕಾರದ ಮುಂದೆ ತಾವು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಸಿದ್ದು ಸರ್ಕಾರವು ಆಗಸ್ಟ್ ತಿಂಗಳಲ್ಲಿ ಶಾಲಾ ಮಕ್ಕಳ ಬಿಸಿಯೂಟವನ್ನು ಕಿತ್ತುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಭಿಕ್ಷೆ ಬೇಡಿಯಾದರೂ ಮಕ್ಕಳ ಹೊಟ್ಟೆ ತುಂಬಿಸುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ಟರು ಅಂದು ಸರ್ಕಾರಕ್ಕೆ ಸವಾಲು ಹಾಕಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಶಾಲೆಯ ಮಕ್ಕಳಿಗೆ ಬರುತ್ತಿದ್ದ ಅನ್ನದಾನದ ಅನುದಾನವನ್ನು ಸರ್ಕಾರ ಕಿತ್ತುಕೊಂಡಿದ್ದರಿಂದ, ಶಾಲೆಯ ಮಕ್ಕಳು ತಮ್ಮ ಅನ್ನಕ್ಕೆ ಬೇಕಾದ ಅಕ್ಕಿಯನ್ನು ತಾವೇ ಬೆಳೆದು ಸಾಧನೆ ಮಾಡಿದ್ದಾರೆ.
ಏಳು ಎಕರೆ ಶಾಲೆಗೆ ಸೇರಿದ ಗದ್ದೆಯಲ್ಲಿ ಸ್ವತಃ ಮಕ್ಕಳೇ ಭತ್ತದ ಪೈರು ನಾಟಿ ಮಾಡಿ, ಫಸಲು ತೆಗೆದಿದ್ದಾರೆ. ಕಟಾವು ಮಾಡಿರುವ ಭತ್ತದ ಬೆಳೆಯಲ್ಲಿ ಸುಮಾರು 20 ಕ್ವಿಂಟಾಲ್ನಷ್ಟು ಭತ್ತ ಸಿಕ್ಕಿರುವುದು ಮಕ್ಕಳ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಸರ್ಕಾರ ಅನ್ನ ಕಸಿದರೂ ಪರವಾಗಿಲ್ಲ, ನಮಗೆ ಬೇಕಾದ ಅನ್ನದ ದಾರಿಯನ್ನು ಹುಡುಕಿದ್ದೇವೆ ಎನ್ನುವ ಖುಷಿಯಲ್ಲಿದ್ದಾರೆ ಶ್ರೀರಾಮ ಶಾಲೆಯ ಮಕ್ಕಳು.