ಮಂಗಳೂರು,ಮಾ 21(MSP): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಟಿಕೆಟ್ ಹಂಚಿಕೆಯ ಘೋಷಣೆ ನಿರ್ಣಾಯ ಹಂತಕ್ಕೆ ತಲುಪಿದ್ದು ಗುರುವಾರ ಜಿಲ್ಲೆಯ ಎಲ್ಲಾ ಆಕಾಂಕ್ಷಿಗಳಿಗೆ ದೆಹಲಿಯಿಂದ ಬುಲಾವ್ ಬಂದಿದ್ದು, ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎನ್ನುವ ಕುತೂಹಲ ಹುಟ್ಟುಹಾಕಿದೆ.
ಕಾಂಗ್ರೆಸ್ ಪಕ್ಷದಿಂದ, ರಮಾನಾಥ ರೈ, ಮಿಥುನ್ ರೈ, ವಿನಯ್ ಕುಮಾರ್ ಸೊರಕೆ, ರಾಜೇಂದ್ರ ಕುಮಾರ್, ಬಿ.ಕೆ ಹರಿಪ್ರಸಾದ್ , ಕಣಚೂರು ಮೋನು ಟಿಕೆಟ್ ಆಕಾಂಕ್ಷಿಗಳಾಗಿದ್ದು ಇವರನ್ನು ದೆಹಲಿಗೆ ಆಹ್ವಾನಿಸಲಾಗಿದ್ದು ಇವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಅವರನ್ನು ದೆಹಲಿಗೆ ಇಂದು ಆಹ್ವಾನಿಸಲಾಗಿದೆ.
ಟಿಕೆಟ್ ಹಂಚಿಕೆಯಾಗುವ ಮೊದಲು ಕ್ಷೇತ್ರದಲ್ಲಿ ಪಕ್ಷ ಅಭ್ಯರ್ಥಿಯನ್ನು ಗೆಲ್ಲಿಸುವ ಬಗ್ಗೆ ನಾಯಕರು ಆಕಾಂಕ್ಷಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಪರವಾಗಿ ಕೆಲಸ ಮಾಡುವ ಬಗ್ಗೆ ಹಾಗೂ ಗೆಲ್ಲುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಲಿದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಯುವ ನಾಯಕ ಮಿಥುನ್ ರೈ ಅವರ ಹೆಸರೂ ಧಿಡೀರ್ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದು, ಅವರಿಗೆ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯಾವ ಮಾನದಂಡದ ಮೇಲೆ ಪಕ್ಷ ಈ ನಾಯಕರಿಗೆ ಟಿಕೆಟ್ ನೀಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಟಿಕೆಟ್ ಯಾರಿಗೆ ಅನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುವಂತೆ ಮಾಡಿದೆ.
ಇನ್ನೊಂದೆಡೆ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಲು ಚಿಂತನೆ ನಡೆಸಿದ್ದು ಇತರೆ ಆಕಾಂಕ್ಷಿಗಳ ಪೈಕಿ ಗೆಲ್ಲುವ ಅಭ್ಯರ್ಥಿಯಾಗಿ ಮಿಥುನ್ ರೈ ಮೊದಲ ಸ್ಥಾನದಲ್ಲಿ ಗುರುತಿಸಕೊಂಡಿದ್ಧಾರೆ. ಇನ್ನು ಪ್ರಮುಖವಾಗಿ ಹಿಂದುತ್ವದ ಅಲೆ ಇರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಿಥುನ್ ರೈ ಅವರು ಹಿಂದುತ್ವದ ವಿಚಾರದಲ್ಲೂ ಮುಂಚೂಣಿಯಲ್ಲಿದ್ದಾರೆ. ಯುವ ಮತದಾರರನ್ನು ಸೆಳೆಯಬಲ್ಲ ನಾಯಕನಾಗಿ ಗುರುತಿಸಿಕೊಂಡ ಹಿನ್ನಲೆಯಲ್ಲಿ ಮಿಥುನ್ ರೈಗೆ ಟಿಕೆಟ್ ದೊರಕುವ ಸಾಧ್ಯತೆ ಗೋಚರಿಸ್ತಾ ಇದೆ.