ಕಾರ್ಕಳ, ಮಾ 21(SM): ಮಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಉಡುಪಿ ಕಡೆಗೆ ತೆರಳುತ್ತಿದ್ದ ಕಾರೊಂದರಲ್ಲಿ ಅಕ್ರಮ ಹಣ ಸಾಗಾಟ ಪ್ರಕರಣವೊಂದು ಪತ್ತೆಯಾಗಿದೆ.
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೊಂಡ ಹಿನ್ನಲೆಯಲ್ಲಿ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಸಾಣೂರು ಮುರತ್ತಂಗಡಿಯಲ್ಲಿ ಸ್ಥಾಪಿಸಲಾಗಿರುವ ವಾಹನ ತಪಾಸಣಾ ಕೇಂದ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮಂಗಳೂರಿನ ಶಕ್ತಿನಗರದ ನಿವಾಸಿ ಶಂಕರ ನಾರಾಯಣ ಎನ್.ಕಾರಂತ ತನ್ನ ಕಾರಿನಲ್ಲಿ ಯಾವುದೇ ದಾಖಲೆಗಳಿಲ್ಲದೆ 3 ಲಕ್ಷ ರೂ. ಸಾಗಾಟ ಮಾಡುತ್ತಿದ್ದರು.
ಜೆರಾಕ್ಸ್ ಯಂತ್ರದ ಮಾರಾಟದಲ್ಲಿ ಸಂಗ್ರಹಿಸಿದ ಹಣ ಎಂಬುವುದಾಗಿ ಕಾರಂತ ಹೇಳಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಹಣ ಸಾಗಾಟ ಮಾಡಿದ ಶಂಕರ ನಾರಾಯಣ ಎನ್. ಕಾರಂತ, ಅವರು ಚಲಾಯಿಸಿಕೊಂಡು ತೆರಳುತ್ತಿದ್ದ ಕಾರು ಹಾಗೂ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣ 3 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡಿರುವ ಮೊತ್ತವನ್ನು ಪೊಲೀಸರು ತಹಶೀಲ್ದಾರ್ ಪುರಂದರ ಹೆಗ್ಡೆಯವರಿಗೆ ಹಸ್ತಾಂತರಿಸಿದ್ದಾರೆ.
ಘಟನೆಯ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.