ಮಂಗಳೂರು, ಮಾ 22(MSP): ಮತದಾನ ಜಾಗೃತಿಗಾಗಿ ದ್ವಿಚಕ್ರ ವಾಹನದಲ್ಲಿ "ಅಖಂಡ ಕರ್ನಾಟಕ ಮತದಾನ ಜಾಗೃತಿ ಅಭಿಯಾನ " ಆರಂಭಿಸಿರುವ 43 ವರ್ಷದ ಬಸವರಾಜು ಎಸ್ ಕಲ್ಲು ಸಕ್ಕರೆ ಮಾ.೨೨ರ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಿಂದ ಏಕಾಂಗಿಯಾಗಿ ಹೊರಟು, ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ, ಸರ್ಕಾರಿ ಶಾಲಾ ಕಾಲೇಜು ಮತ್ತು ಗ್ರಾಮ ಪಂಚಾಯಿತಿ ಹಾಗೂ ನಗರ, ಗ್ರಾಮಗಳಲ್ಲಿ ಜನರಿಗೆ ಮತದಾನ ಅರಿವು ಮೂಡಿಸುತ್ತಿದ್ದಾರೆ.
ಇಲ್ಲಿಯವರೆಗೆ 4000 ಸಾವಿರ ಕಿ.ಮೀ ಕ್ರಮಿಸಿ 21 ಜಿಲ್ಲೆಗಳ ಪ್ರವಾಸ ಮುಗಿಸಿ 22ನೇ ಜಿಲ್ಲೆಯಾಗಿ ಮಂಗಳೂರಿಗೆ ಬಂದಿರುವ ಬಸವರಾಜು ಎಸ್ ಕಲ್ಲು ಸಕ್ಕರೆ, ಈ ಅಭಿಯಾನಕ್ಕಾಗಿ 40,000 ರೂ. ಸಾವಿರ ಸಂಬಳ ಬರುತ್ತಿದ್ದ ಕೆಲಸ ತೊರೆದಿದ್ದಾರೆ. "ಬಹಳಷ್ಟು ಜನ ತಮ್ಮ ಅಭಿಯಾನದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಮಾಜ ಬದಲಾಯಿಸುವ ಭ್ರಮೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಅಷ್ಟೇ ಸಹಜವಾಗಿ ನಾನು ಉತ್ತರಿಸುತ್ತೇನೆ. ಏಕೆಂದರೆ ನನಗೆ ಸಮಾಜ ಬದಲಾವಣೆ ಮಾಡಿ ಬಿಡುವೆ ಎಂಬ ಭ್ರಮೆ ಇಲ್ಲ, ಆದರೆ ಬದಲಾವಣೆಗೆ ನನ್ನದೆ ಮೊದಲ ಹೆಜ್ಜೆಯಾಗಿರಲಿ ಎಂಬ ಆಸೆ " ಎನ್ನುತ್ತಾರೆ ದ್ವಿಚಕ್ರ ವಾಹನ ಸಂಚಾರಿ ಬಸವರಾಜು ಎಸ್ ಕಲ್ಲು ಸಕ್ಕರೆ.
ಫೆ. 22 ರಂದು ಬಾಗಲಗುಂಟೆ ಎಮ್ ಈ ಐ ಕ್ರೀಡಾ ಮೈದಾನದಲ್ಲಿ ಹೊರಟ ಇವರು, ಮಾರ್ಗಮದ್ಯೆ ಸಿಗುವ ಸರಕಾರಿ ಶಾಲೆಗಳಿಗೆ ಭೇಟಿ, ಮತದಾನ ಜಾಗೃತಿಯೊಂದಿಗೆ, ಕನ್ನಡ ಬಳಸಿ ,ಕನ್ನಡ ಶಾಲೆ ಉಳಿಸಿ ,ರಕ್ತದಾನ ಮಾಡಿ ,ಗಿಡ ನೆಡಿ ಎನ್ನುವ ಸಂದೇಶವುಳ್ಳ ಕರಪತ್ರಗಳನ್ನು ಹಂಚುತ್ತಿದ್ದಾರೆ. ಇವರ ಜಾಥಾಕ್ಕೆ ಚುನಾವಣ ಆಯೋಗವು ಕೂಡ ಈ ಯಾತ್ರೆಗೆ ಸಹಕರಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.