ಪುತ್ತೂರು, ಮಾ 22(MSP): ತಾಲ್ಲೂಕಿನ ಕೆಯ್ಯೂರು ಗ್ರಾಮದಿಂದ 14 ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು 2 ದಿನಗಳ ಹಿಂದೆಯೇ ಪತ್ತೆ ಮಾಡಿದ್ದ ಪೊಲೀಸರು, ಅಪಹರಣದ ಶಂಕಿತ ಆರೋಪಿಯನ್ನು ಬೆಂಗಳೂರಿನಲ್ಲಿ ಗುರುವಾರ ಬಂಧಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದೇ 8 ರಂದು ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಅಸ್ಸಾಂ ಮೂಲದ ಗಾರೆ ಕಾರ್ಮಿಕರ ಪೈಕಿ ಅಖ್ತರ್ ಹುಸೇನ್ ಎಂಬಾತನೂ ಕೂಡ ಅದೇ ದಿನದಿಂದ ನಾಪತ್ತೆಯಾಗಿದ್ದ. ಆತನೇ ಆಕೆಯನ್ನು ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ವಿದ್ಯಾರ್ಥಿನಿಯ ತಂದೆ ಭಾಸ್ಕರ ಪೂಜಾರಿ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಸಂಪ್ಯ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸರು ಶಂಕಿತ ಆರೋಪಿ ಅಖ್ತರ್ ಹುಸೇನ್ನನ್ನು ಕೇಂದ್ರೀಕರಿಸಿ ಹುಡುಕಾಟ ಆರಂಭಿಸಿದ್ದರು. ಆದರೆ ವಿದ್ಯಾರ್ಥಿನಿಯ ಬಳಿ ಇದ್ದ ಮತ್ತು ಶಂಕಿತ ಆರೋಪಿಯ ಮೊಬೈಲ್ ಅಂದೇ ಸಂಜೆಯಿಂದ ಸ್ವಿಚ್ ಆಫ್ ಆಗಿದ್ದು, ಶಂಕಿತ ಆರೋಪಿ ಪುತ್ತೂರಿನಿಂದ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿರುವ ಕುರಿತು ಮಾಹಿತಿ ಲಭಿಸಿತ್ತು.
ಶಂಕಿತ ಆರೋಪಿ ಮತ್ತು ವಿದ್ಯಾರ್ಥಿನಿಯ ಜಾಡು ಹಿಡಿದು ಹೊರಟ ಪೊಲೀಸರು 2 ದಿನಗಳ ಹಿಂದೆ ವಿದ್ಯಾರ್ಥಿನಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಬೆಂಗಳೂರಿನಲ್ಲಿ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Read more: ಪುತ್ತೂರು: ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್- ಕಿಡ್ನಾಪ್ ಕೇಸ್ ದಾಖಲು