ಮಂಗಳೂರು,ಮಾ 22(MSP): ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ತನ್ನ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೆ ಕಣಕ್ಕಿಳಿಸಿದ್ದು ಇತ್ತ ಕಡೆ ನಳಿನ್ ಕುಮಾರ್ ವಿರುದ್ದ ಸ್ವರ್ಧಿಸಲು ಕಾಂಗ್ರೆಸ್ ಕೂಡಾ ರಣತಂತ್ರ ರೂಪಿಸಿದ್ದು ತನ್ನ ಅಭ್ಯರ್ಥಿಯಾಗಿ, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಾಗಿದೆ.
ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರ ದೆಹಲಿಯ ನಿವಾಸ ಮತ್ತು ಹೊಟೇಲ್ ಸಾಮ್ರಾಟ್ ನಲ್ಲಿ ಗುರುವಾರ ಸಭೆ ಸೇರಿದ ಜಿಲ್ಲಾ ಕಾಂಗ್ರೆಸ್ ಘಟಾನುಘಟಿಗಳು ಹಾಗೂ ಆಕಾಂಕ್ಷಿಗಳು ಚರ್ಚೆ ನಡೆಸಿ ಮಿಥುನ್ ರೈ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ ಗೆಲುವು ಸಾಧಿಸಲು ಯುವ ನಾಯಕನ ಅಗತ್ಯತೆ ಮನಗಂಡ ಕಾಂಗ್ರೆಸ್ ಹೈಕಮಾಂಡ್ ಮಿಥುನ್ ರೈ ಗೆ ಟಿಕೆಟ್ ನೀಡಿ ಕಣಕ್ಕಿಳಿಸಲು ಸಿದ್ದತೆ ನಡೆಸಿದೆ.
ಒಟ್ಟಾರೆ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಇಬ್ಬರು ಬಿಸಿ ರಕ್ತದ ಯುವ ಅಭ್ಯರ್ಥಿಗಳ ಜಿದ್ದಾ ಜಿದ್ದಿನ ಕ್ಷೇತ್ರವಾಗಲಿರುವುದು ಮಾತ್ರ ಸತ್ಯ.