ಬಂಟ್ವಾಳ, ನ 4: ಬಿಸಿರೋಡಿನ ಕಂಚಿಕಾರ್ ಪೇಟೆಯ ಸೇತುವೆಯ ಅಡಿಯಲ್ಲಿ ಇರುವ ನೇತ್ರಾವತಿ ನದಿಗೆ ಸತ್ತ ಕೋಳಿಗಳನ್ನು ಮತ್ತು ಕೋಳಿ ತ್ಯಾಜ್ಯಗಳನ್ನು ಕೋಳಿ ಅಂಗಡಿಯವರು ಎಸೆದು ಹೋಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇಂತಹ ಘಟನೆಗಳು ಈ ಭಾಗದಲ್ಲಿ ಪದೇ ಪದೇ ನಡೆಯುತ್ತಿದೆ. ಸತ್ತ ಕೋಳಿಗಳನ್ನು ಮತ್ತು ಕೋಳಿ ತ್ಯಾಜ್ಯಗಳನ್ನು ಕೋಳಿ ಅಂಗಡಿಯವರು ಎಸೆದು ಹೋಗುವುದು ಇದೇ ಮೊದಲ ಬಾರಿಯಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅನೇಕ ಬಾರಿ ಕೋಳಿ ಮತ್ತು ಇನ್ನಿತರ ತ್ಯಾಜ್ಯಗಳನ್ನು ನದಿಗೆ ಎಸೆದು ನೀರನ್ನು ಮಲಿನಗೊಳಿಸಿದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಪುರಸಭೆಯ ಕಣ್ತೆರೆಸುವ ಕೆಲಸ ಅನೇಕ ಭಾರಿ ಮಾಡಿದರೂ ಇಲಾಖೆ ಮಾತ್ರ ನದಿಗೆ ತ್ಯಾಜ್ಯ ಬಿಸಾಡುವವರಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಹೊಟೇಲ್ ಸೇರಿದಂತೆ ಮನೆಯ ಕೊಳಚೆ ನೀರನ್ನು ಕೂಡಾ ನೇರವಾಗಿ ನದಿಗೆ ಪುರಸಭಾ ವ್ಯಾಪ್ತಿಯಲ್ಲಿ ಬಿಡುತ್ತಿದ್ದಾರೆ. ಆದರೆ ಇಲಾಖೆ ಮತ್ರ ಮೌನವಹಿಸಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ತ್ಯಾಜ್ಯಗಳಿಂದ ಕಲುಷಿತಗೊಂಡ ನೇತ್ರಾವತಿಯ ನೀರನ್ನು ಬಂಟ್ವಾಳ ಸಹಿತ ಮಂಗಳೂರಿನ ಬಹತೇಕ ಜನರು ಕುಡಿಯುತ್ತಿದ್ದಾರೆ.