ಉಡುಪಿ,ಮಾ22(AZM):ನಾನು ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದು, ಮೈತ್ರಿ ಧರ್ಮದಂತೆ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಇಂದು ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಪ್ರಮೋದ್ ಅವರು ಮಾದ್ಯಮಗಳೊಂದಿಗೆ ಮಾತನಾಡಿದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನು ಕಾಂಗ್ರೆಸ್ -ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿದ್ದು, ಎರಡು ಪಕ್ಷದ ಚಿಹ್ನೆಯನ್ನು ಒಂದೇ ಶಾಲಿನಲ್ಲಿ ಮುದ್ರಿಸಿಕೊಂಡಿದ್ದೇನೆ. ಇಂತಹ ಶಾಲು ಈ ವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು ಎಪ್ರೀಲ್ 18 ರವರೆಗೆ ತೊಡುತ್ತೇನೆ. ಕಾಂಗ್ರೆಸ್- ಜೆಡಿಎಸ್ ಹಾಲು ಜೇನಿನಂತೆ ಬೆರೆಯಲಿದೆ ಎಂದು ಹೇಳಿದರು.
. ಉಭಯ ಜಿಲ್ಲೆಗಳ ಜನತೆ ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಬೇಕು. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ಅವಕಾಶ ನನಗೆ ಸಿಕ್ಕಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದು ಒಂದು ವೇಳೆ ಗೆದ್ದು ಬಂದರೆ ರಾಜ ಧರ್ಮಪಾಲಿಸುತ್ತೇನೆ ಎಂದರು.
ಇನ್ನು ಮಾರ್ಚ್ 25ರಂದು ಎರಡು ಪಕ್ಷದ ನಾಯಕರೊಂದಿಗೆ ಸೇರಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.