ವರದಿ: ತೇಜಸ್ ಸುಳ್ಯ
ಸುಳ್ಯ, ಮಾ 23(MSP): ಸುಳ್ಯ ತಾಲೂಕಿನ ಜಾಲ್ಸೂರು -ಕಾಸರಗೋಡು ರಸ್ತೆಯ ಮೂಲಕ ಸಾಗಿದರೆ ಇಲ್ಲಿಯ ಇರುವರುಬ್ಬಂಗಳ ಮಾಪಳಡ್ಕ ಎಂಬಲ್ಲಿಯ ರಸ್ತೆಯ ಎಡಭಾಗದಲ್ಲಿರುವ ಅರಣ್ಯದ ಪ್ರದೇಶದೊಳಗೆ ಹಸಿರು ಸಿರಿಯ ಮದ್ಯೆ, ಮಸೀದಿಗಳಲ್ಲಿಯೇ ವಿಶಿಷ್ಟ ಮತ್ತು ಅಪೂರ್ವ ಎಣಿಸುವ ಪ್ರಾರ್ಥನ ಮಂದಿರವೊಂದಿದೆ. ಇದೇ ಸುಳ್ಯ ಮಾಪಳಡ್ಕದ ಬದ್ರಿಯಾ ಜುಮ್ಮಾ ಮಸೀದಿ.
"ಪುಟ್ಟದಾದರೂ ಮಸೀದಿಯ ಕಾರ್ಣಿಕ ಮಾತ್ರ ದೊಡ್ಡದು " ಎಂದು ಈ ಮಸೀದಿ ವಿಶೇಷ ಜನಮನ್ನಣೆ ಗಳಿಸಿದೆ. ಎಲ್ಲ ಜಾತಿಮತಗಳ ಜನ ಇಲ್ಲಿಗೆ ಬಂದು ಹರಕೆ ಸಲ್ಲಿಸುತ್ತಾರೆ. ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ನಡೆಸುತ್ತಾರೆ. ಹಿಂದು ಬಾಂಧವರು ಕೂಡಾ ಅವರ ಸಂಪ್ರದಾಯದಂತೆ ಪ್ರಾರ್ಥನೆ ಮಾಡುತ್ತಾರೆ. ಹರಕೆ ಹೇಳಿಕೊಳ್ಳುತ್ತಾರೆ. ಇಲ್ಲಿ ಪ್ರಮುಖ ಪ್ರಸಾದವಾಗಿ ಕೋಳಿರೊಟ್ಟಿಯನ್ನು ನೀಡಲಾಗುತ್ತದೆ.
ಮಸೀದಿ ಸಮಿತಿ ಹಾಗೂ ಭಕ್ತರ ಪ್ರಕಾರ ಇಲ್ಲಿನ ಪವಾಡಗಳನ್ನು ಗಮನಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಈ ಮಸೀದಿ ದಟ್ಟಾರಣ್ಯದ ಒಳಗಡೆ ಇದ್ದರೂ ಇಲ್ಲಿಗೆ ಹಿಂದು, ಮುಸ್ಲಿಂರು ಎನ್ನದೇ ಸರ್ವಧರ್ಮಿಯರು ಹರಕೆ ಹೇಳಿಕೊಂಡು ತಮ್ಮ ಬೇಡಿಕೆ ಇಡೇರಿಸಿಕೊಳ್ಳುವುದು ವಿಶೇಷ. "ಶಿಶುವೊಂದು ಹೃದಯ ರಂದ್ರ ಕಾಯಿಲೆಯಿಂದ ಬಳಲುತ್ತಿದ್ದು ವೈದ್ಯರ ಪ್ರಕಾರ ಶಸ್ತ್ರ ಚಿಕಿತ್ಸೆ ಅಗತ್ಯವಿತ್ತು. ನವಜಾತ ಶಿಶುವಿನ ಶಸ್ತ್ರ ಚಿಕಿತ್ಸೆ ಮಾಡಿಸಲು ಮನಸೊಪ್ಪದೆ ಪೋಷಕರು ಮಸೀದಿ ಪ್ರಾರ್ಥನೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದರು. ಆದರೆ ತಿಂಗಳು ಕಳೆದು ವೈದ್ಯರಲ್ಲಿಗೆ ತೆರಳಿ ಶಿಶುವನ್ನು ಮತ್ತೆ ಪರೀಕ್ಷೆಗೊಳಪಡಿಸಿದಾಗ್ ಹೃದಯದಲ್ಲಿದ್ದ ರಂದ್ರ ಮುಚ್ಚಿದೆ ಎಂದು ವೈದರೇ ಅಚ್ಚರಿ ವ್ಯಕ್ತಪಡಿಸಿ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲವೆಂದರು" ಎಂದು ಭಕ್ತರೊಬ್ಬರು ಹೇಳಿದ ಪವಾಡಗಳನ್ನು ಉದಾಹರಿಸುತ್ತಾರೆ ಮಸೀದಿ ಸಮಿತಿಯ ಅಧ್ಯಕ್ಷರು.
ಇದಲ್ಲದೆ ಅಸ್ತಮಾ ಮುಂತಾದ ಅನಾರೋಗ್ಯ ಸಮಸ್ಯೆಗಳಿಗೆ ಬಾಳೆಹಣ್ಣು,ಸಕ್ಕರೆಯನ್ನು ಇಲ್ಲಿ ಹರಕೆ ರೂಪದಲ್ಲಿ ನೀಡಲಾಗುತ್ತದೆ. ಇಲ್ಲಿ ನೀಡುವ ಕೋಳಿರೊಟ್ಟಿ ಪ್ರಸಾದ ಸೀಕರಿಸಿದರೆ ಅನೇಕ ಸಮಸ್ಯೆಗಳಿ ಪರಿಹಾರವಾಗುತ್ತದೆ ಎಂದು ಈ ಮಸೀದಿಯ ಭಕ್ತರಲ್ಲಿ ನಂಬಿಕೆ ಇದೆ.