ಮಂಗಳೂರು ನ 5 : ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿನ ಫ್ಲೈಓವರ್ ಕಾಮಗಾರಿ ವಿಳಂಬದಿಂದಾಗಿ ನಿರಂತರ ಅಪಘಾತಗಳು ನಡೆಯುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಒಂದು ಗಂಟೆಯ ಕಾಲ ರಾ.ಹೆ.ಯನ್ನು ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ. ಹಿಂಬದಿ ಸವಾರ ಬಜಾಲ್ ನಿವಾಸಿ ಜೀವನ್ ಮೃತಪಟ್ಟವರು . ಸವಾರ ರಾಜೇಶ್ ವೇಗಸ್ ಕಾಲು ಮುರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಜಾಲಿನಿಂದ ಬೀರಿ ಕಡೆಗೆ ಸ್ಕೂಟರಿನಲ್ಲಿ ಬರುವ ಸಂದರ್ಭ ಅಪಘಾತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ೬೬ರ ತೊಕ್ಕೊಟ್ಟು ಜಂಕ್ಷನ್ನಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಏಕಮುಖ ಸಂಚಾರವಿರುವ ರಸ್ತೆಯಲ್ಲಿ ಶನಿವಾರ ರಾತ್ರಿ ಸ್ಕೂಟರನ್ನು ಲಾರಿ ಹಿಂದಿಕ್ಕುವ ಭರದಲ್ಲಿ ಅಪಘಾತ ಸಂಭವಿಸಿದೆ. ಇಬ್ಬರು ಸವಾರರಲ್ಲಿ ಒಬ್ಬಾತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸುವ ಮಧ್ಯೆ ಮೃತಪಟ್ಟರೆ, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ. ಇನ್ನು ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಅನಾನುಕೂಲವಾಗುತ್ತಿದ್ದು, ಎರಡು ವಾರದ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು ರಸ್ತೆ ತಡೆ ನಡೆಸಿದರು. ಮಧ್ಯಾಹ್ನ11 ಗಂಟೆಯೊಳಗೆ ಸುಗಮ ವಾಹನ ಸಂಚಾರಕ್ಕೆ ದುರಸ್ತಿಗೊಳಿಸದೇ ಇದ್ದಲ್ಲಿ ಸೋಮವಾರ ಮತ್ತೆ ರಾ.ಹೆ.ಬಂದ್ ನಡೆಸಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.