ಉಡುಪಿ,ಮಾ23(AZM) : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡದ ಬಗ್ಗೆ ಅಸಮಾಧಾನಗೊಂಡಿರುವ ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಮೃತ್ ಶೆಣೈ ಪಕ್ಷೇತರಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟ ಹಿನ್ನಲೆಯಲ್ಲಿ ಆರಂಭದಿಂದಲೇ ವಿರೋಧ ಮಾಡಿಕೊಂಡು ಬಂದ ಎಐಸಿಸಿ ಸದಸ್ಯ ಅಮೃತ್ ಶೆಣೈ ಅವರು ತಮ್ಮ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಪಕ್ಷೇತರ ಸ್ಪರ್ಧಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿಯಾಗಿದ್ದ ಅಮೃತ್ ಶೆಣೈ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ರೀತಿಯ ಪ್ರಚಾರ ಕೂಡ ನಡೆದಿತ್ತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ಹೈಕಮಾಂಡ್ ನಿರ್ಧಾರದಿಂದ ತೀವ್ರ ಬೇಸರವಾಗಿದೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅತ್ಯುತ್ತಮ ಅವಕಾಶ ಇದ್ದರೂ ಸಹ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದರಿಂದ ಮತಯಂತ್ರದಲ್ಲಿ ಕಾಂಗ್ರೆಸ್ ಚಿಹ್ನೆಯೇ ಮಾಯಾವಾಗಲಿದೆ ಇದರಿಂದ ನಿಷ್ಠಾವಂತ ಹಲವಾರು ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ನನ್ನ ಅಭಿಮಾನಿಗಳಿಗೆ ಬೇಸರವಾಗಿಸಿದೆ. ತಾನು ಪಕ್ಷೇತರನಾಗಿ ಸ್ಪರ್ಧಿಸಬೇಕು ಎಂದು ನನ್ನ ಅಭಿಮಾನಿಗಳು ತೀವ್ರ ಒತ್ತಡ ಹೇರುತ್ತಿದ್ದು ಈ ಬಗ್ಗೆ ಸಂಜೆಯ ಒಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದರು.
ಈ ನಡುವೆ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ಅಮೃತ್ ಶೆಣೈ ಅವರು ಪಕ್ಷೇತರರಾಗಿ ಚುನಾವಣೆಗೆ ನಿಂತರೆ ಸಮಸ್ಯೆ ಆಗಬಹುದೆನ್ನುವ ನಿಟ್ಟಿನಲ್ಲಿ ಅವರ ಮನವೊಲಿಕೆ ಮಾಡುವ ಸಲುವಾಗಿ ಅವರ ಮನೆಗೆ ತೆರಳಿ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.