ಸುಳ್ಯ,ಮಾ24(AZM):ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಣ್ಣ ಹೋಟೆಲ್ ಮಾಲೀಕರೊಬ್ಬರಿಗೆ ನಾಲ್ಕು ಕೋಟಿ ರೂಪಾಯಿ ಬಂಪರ್ ಲಾಟರಿ ಬಹುಮಾನ ಲಭಿಸಿದೆ.
ಸುಳ್ಯದಲ್ಲಿ ಸಣ್ಣ ಹೋಟೆಲ್ ನಡೆಸುತ್ತಿರುವ ಸುಧಾಮ ಎಂಬುವವರು ಮಾರ್ಚ್ 1ರಂದು ಕಾಸರಗೋಡಿನ ಮಲ್ಲ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ಮರಳುವ ವೇಳೆ ಕಾಸರಗೋಡಿನಲ್ಲಿ 150 ರೂಪಾಯಿ ನೀಡಿ 3 ಲಾಟರಿ ಖರೀದಿ ಮಾಡಿದ್ದರು. ಅದರಲ್ಲಿ ಸಮ್ಮರ್ ಬಂಪರ್ ಡ್ರಾದಲ್ಲಿ ಸುದಾಮ ಅವರಿಗೆ 4 ಕೋಟಿ ರೂ. ಬಹುಮಾನ ಲಭಿಸಿದೆ.
ಯಾವಗಾದರೂ ಒಮ್ಮೆ ಕಾಸರಗೋಡಿಗೆ ಹೋದಾಗ ಲಾಟರಿ ಖರೀದಿಸುತ್ತಿದ್ದ ಸುಧಾಮ ಅವರು ಈ ಬಾರಿ ನಿರೀಕ್ಷೆ ಇಲ್ಲದ ಕಾರಣ ಫಲಿತಾಂಶ ನೋಡಿರಲಿಲ್ಲ. ಆದರೆ ಸುಳ್ಯ ಮೂಲದ ವ್ಯಕ್ತಿಗೆ ಲಾಟರಿ ಸಿಕ್ಕಿದೆ ಎಂದು ಮಾಹಿತಿ ಸಿಕ್ಕಿದಾಗ ಅನುಮಾನದಿಂದ ಲಾಟರಿ ನೋಡಿದ ವೇಳೆ ಅವರಿಗೆ ಅದೃಷ್ಟ ಖುಲಾಯಿಸಿದು ತಿಳಿದು ಬಂದಿದೆ.
24 ವರ್ಷಗಳಿಂದ ಸಣ್ಣ ಹೋಟೆಲ್ ಉದ್ಯಮ ನಡೆಸುತ್ತಿರುವ ತನಗೆ ಬಹುಮಾನ ಬಂದಿರುವುದು ಅನಿರೀಕ್ಷಿತ ಹಾಗಾಗಿ ಈ ಹಣ ಯಾವ ಕಾರ್ಯಕ್ಕಾಗಿ ಬಳಸಬೇಕು ಎಂಬ ತೀರ್ಮಾನ ಇನ್ನೂ ಮಾಡಿಲ್ಲ. ಆದರೆ ಇದನ್ನು ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವ ಯೋಚನೆ ಇಟ್ಟುಕೊಂಡಿದ್ದೇನೆ ಎಂದು ಸುದಾಮ ಅವರು ಹೇಳಿದ್ದಾರೆ.