ಮಂಗಳೂರು, ಮಾ25(SS):ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ತುದಿಗಾಲಲ್ಲಿ ನಿಂತಿರುವಂತೆ ಕಂಡು ಬರುತ್ತಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಳೆದ ಸತತ 7 ಚುನಾವಣೆಗಳಲ್ಲಿ ಸೋತಿದೆ. ಇದರಲ್ಲಿ 6 ಬಾರಿ ಜನಾರ್ದನ ಪೂಜಾರಿ ಮತ್ತು ಒಮ್ಮೆ ವೀರಪ್ಪ ಮೊಯ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಈ ಏಳರಲ್ಲಿ ಬಿಜೆಪಿಯಿಂದ 4 ಬಾರಿ ಧನಂಜಯ ಕುಮಾರ್, ಒಮ್ಮೆ ಸದಾನಂದ ಗೌಡ ಮತ್ತು 2 ಬಾರಿ ನಳಿನ್ ಕುಮಾರ್ ಕಟೀಲ್ ಗೆದ್ದು ಬಂದಿದ್ದಾರೆ. ಇದೀಗ ಕರಾವಳಿಯನ್ನು ಹೇಗಾದರೂ ಮಾಡಿ ಗೆಲ್ಲಲು ಕಾಂಗ್ರೆಸ್ - ಜೆಡಿಎಸ್ ಒಂದಾಗಿ ಕಾರ್ಯತಂತ್ರ ರೂಪಿಸುತ್ತಿದೆ.
ಈ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳ ಜಂಟಿ ಚುನಾವಣಾ ಸಮಿತಿ ರಚಿಸಿದ್ದು, ಆ ಮೂಲಕ ಪ್ರಚಾರ ತಂತ್ರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರಕಾರದ ಆಶಯದಂತೆ ಇಲ್ಲೂ ಸಮ್ಮಿಶ್ರವಾಗಿ ಚುನಾವಣೆ ಎದುರಿಸಲು ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯ ಉಭಯ ಪಕ್ಷದ ಹಿರಿಯರ ಜಂಟಿ ಸಮಿತಿ ರಚಿಸಲಾಗಿದೆ. ಕ್ಷೇತ್ರದ ನಿಷ್ಕ್ರಿಯ ಸಂಸದರಿಗೆ ನಿವೃತ್ತಿ ನೀಡಿ, ಕ್ರಿಯಾಶೀಲ ಸಂಸದನ ಆಯ್ಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ನೀಡಿದೆ ಎಂದು ತಿಳಿಸಿದ್ದಾರೆ.
ಹಾಲಿ ಸಂಸದರು 10 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. 28 ವರ್ಷದ ಬಿಜೆಪಿ ಅಧಿಕಾರದಲ್ಲಿ ಒಂದು ಹೆಜ್ಜೆ ಗುರುತೂ ಮೂಡಿಲ್ಲ. ಇದೇ ಕಾಂಗ್ರೆಸ್ಗೆ ಲಾಭ ತರಲಿದ್ದು, ಎಲ್ಲ ನಾಯಕರು ಜತೆಯಾಗಿ ಮಿಥುನ್ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಇಲ್ಲಿ ಜನತೆ ಬದಲಾವಣೆ ಬಯಸಿರುವುದು ಮತ್ತು ಬಿಜೆಪಿಗೆ ತನ್ನ ಆಡಳಿತ ವೈಫಲ್ಯ ಮುಳುವಾಗಿ, ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.