ಮಂಗಳೂರು, ಮಾ25(SS): ದಕ್ಷಿಣ ಕನ್ನಡಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಳೆದ ಸತತ 7 ಚುನಾವಣೆಗಳಲ್ಲಿ ಸೋತಿದೆ. ಇದರಲ್ಲಿ 6 ಬಾರಿ ಜನಾರ್ದನ ಪೂಜಾರಿ ಮತ್ತು ಒಮ್ಮೆ ವೀರಪ್ಪ ಮೊಯ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಈ ಏಳರಲ್ಲಿ ಬಿಜೆಪಿಯಿಂದ 4 ಬಾರಿ ಧನಂಜಯ ಕುಮಾರ್, ಒಮ್ಮೆ ಸದಾನಂದ ಗೌಡ ಮತ್ತು 2 ಬಾರಿ ನಳಿನ್ ಕುಮಾರ್ ಕಟೀಲ್ ಗೆದ್ದು ಬಂದಿದ್ದಾರೆ. ಇದೀಗ ಮತ್ತೆ ದಕ್ಷಿಣ ಕನ್ನಡಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಹರಸಾಹಸ ಪಡುತ್ತಿದೆ.
ಈ ಹಿನ್ನೆಲೆಯಲ್ಲಿ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹಿರಿಯ ಕಾಂಗ್ರೆಸ್ ಮುಖಂಡ, ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ನಗರದಲ್ಲಿರುವ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿ (ಮಾ.24) ದೇವರ ದರ್ಶನ ಪಡೆದ ನಳಿನ್, ಗೋಕರ್ಣನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಬಳಿಕ, ದೇವಸ್ಥಾನದ ಕಚೇರಿಯಲ್ಲಿದ್ದ ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದರು. ಮಾತ್ರವಲ್ಲ ಪೂಜಾರಿ ಜತೆ ಕೆಲಹೊತ್ತು ಗೌಪ್ಯ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಮಾತನಾಡಿ, ಜನಾರ್ದನ ಪೂಜಾರಿಯನ್ನು ನಾನು ಬಹಳ ಗೌರವದಿಂದ ಕಂಡವ. ಪೂಜಾರಿ ನಮ್ಮಂಥವರಿಗೆ ಆದರ್ಶ ವ್ಯಕ್ತಿ. ಅವರು ನೇರ ನಡೆ ನುಡಿಯ ರಾಜಕಾರಣಿ. 2009ರ ಚುನಾವಣೆ ವೇಳೆ ಅವರ ವಿರುದ್ಧ ಸ್ಪರ್ಧಿಸಿದ್ರೂ ಅವರ ಆಶೀರ್ವಾದ ಪಡೆದಿದ್ದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 2 ಬಾರಿ ಪೂಜಾರಿ ನನ್ನ ಪ್ರತಿಸ್ಪರ್ಧಿಯಾಗಿದ್ದರು. ಆ ಸಂದರ್ಭದಲ್ಲಿ ನಾನು ಅವರ ಆಶೀರ್ವಾದ ಪಡೆದಿದ್ದೆ. ಅವರ ಆಶೀರ್ವಾದದಿಂದ ಗೆದ್ದಿದ್ದೇನೆ. ಮೂರನೇ ಬಾರಿಯೂ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ. ಆದರ್ಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಜನಾರ್ದನ ಪೂಜಾರಿ ನನಗೆ ರಾಜಕೀಯ ಗುರುಗಳು. ಒಂದು ಕಡೆಯಿಂದ ದೇವರ ಆಶೀರ್ವಾದ, ಇನ್ನೊಂದು ಕಡೆ ನಾರಾಯಣ ಗುರು ಮತ್ತು ಜನಾರ್ದನ ಪೂಜಾರಿ ಆಶೀರ್ವಾದ ಪಡೆದು ನಾನು ಕಣಕ್ಕೆ ಇಳಿಯುತ್ತಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭ ಪೂಜಾರಿ ಮಾತನಾಡಿ, ನಳಿನ್ ಕುಮಾರ್ ಕಟೀಲ್ಗೆ ದೇವರು ಒಳ್ಳೆಯದು ಮಾಡುತ್ತಾರೆ. ಕಾಂಗ್ರೆಸ್ನ ಮಿಥುನ್ ರೈ ಒಳ್ಳೆಯ ಅಭ್ಯರ್ಥಿ. ಆದರೆ ಕಾಂಗ್ರೆಸ್ ಗೆ ಈಗ ಪರಿಸ್ಥಿತಿ ಒಳ್ಳೆಯದಿಲ್ಲ. ಇನ್ನು ಎರಡು ಎಲೆಕ್ಷನ್ ನಲ್ಲಿ ಮೋದಿಯವರೇ ಬರುತ್ತಾರೆ. ಮತ್ಯಾರು ಬರಲ್ಲ. ಜಿಲ್ಲೆಯಲ್ಲಿ ಮಿಥುನ್ ಗೆ ಟಿಕೆಟ್ ಕೊಟ್ಟಿದ್ದಾರೆ. ಆದರೆ ಗೆಲುವು ಅಷ್ಟು ಸುಲಭ ಅಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಸತತ 2 ಬಾರಿದಕ್ಷಿಣ ಕನ್ನಡಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವ ನಳಿನ್ ಕುಮಾರ್ ಕಟೀಲ್ ಈ ಬಾರಿಯ ಚುನಾವಣೆಯಲ್ಲಿಯೂ ಗೆಲ್ಲಲು ಪಕ್ಷದ ಕಾರ್ಯಕರ್ತರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಜೊತೆಗೆ ಈ ಬಾರಿಯೂ ನಳಿನ್ ಅವರಿಗೆ ಪೂಜಾರಿಯ ಆಶೀರ್ವಾದ ವರವಾಗುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.