ಮಂಗಳೂರು, ಮಾ25(SS): ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಮಿಥುನ್ ರೈ,ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆಯಲು ಮತ್ತು ಪೂಜೆ ನೆರವೇರಿಸಲು ಕುದ್ರೋಳಿ ಗೂಕರ್ಣನಾಥೇಶ್ವರ ದೇಗುಲಕ್ಕೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಚಿವ ಯುಟಿ ಖಾದರ್ ದೇಗುಲಕ್ಕೆ ಭೇಟಿ ನೀಡಿದ್ದರು.
ಜನಾರ್ದನ ಪೂಜಾರಿ ಅವರು ಮಿಥುನ್ ರೈ ಅವರಿಗೆ ಆಶೀರ್ವಾದ ನೀಡಿದ ಬಳಿಕ ಕಾಂಗ್ರೆಸ್ ಪಕ್ಷದವರ ಜೊತೆ ಮಾತುಕತೆ ನಡೆಸಿದರು. ನನಗೆ ಅಹಂಕಾರ ಬಂದಿದೆ ಎಂದು ದೇವರು ಕನಸಿನಲ್ಲಿ ಎಚ್ಚರಿಸಿದ್ದಾನೆ. ನಿನ್ನೆ ನಳಿನ್ ಕುಮಾರ್ ಕಟೀಲ್ ಗೆಲ್ಲುತ್ತೇನೆ ಎಂದು ಹೇಳಿದ್ದೆ. ನಾನು ನಳಿನ್ಗೆ ಹಿರಿಯನಾಗಿ ಕೊಟ್ಟ ಆಶಿರ್ವಾದ. ಅದನ್ನು ನಾನು ಈ ಮೊದಲು 2 ಬಾರಿ ಕೊಟ್ಟಿದ್ದೇನೆ. ನಾನು ಕಾಂಗ್ರೆಸ್ ಪಕ್ಷದವ. ನಾನು ಮಿಥುನ್ ಜೊತೆಯಾಗಿ ಸಾಗುತ್ತೇನೆ. ಗೆಲುವು ಖಂಡಿತಾ ಮಿಥುನ್ ಗೆ ಒಲಿದು ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ಮಾತ್ರವಲ್ಲ, ಈ ಬಾರಿ ಗೆಲ್ಲುವ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದೆ. ಯುವಕರಿಗೆ ಅವಕಾಶ ಕೊಡಲು ನನಗೆ ದೇವರ ಆದೇಶ ಬಂದಿದೆ. ಕಾಂಗ್ರೆಸ್ ಪಕ್ಷವು ಅಳೆದು– ತೂಗಿ – ಅರೆದು ಸಮರ್ಥ ಯುವ ನಾಯಕನನ್ನು ಆರಿಸಿದೆ. ಹೀಗಾಗಿ ಮಿಥುನ್ ರೈ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಈ ವೇಳೆ, ಯುಟಿ ಖಾದರ್ ಮಾತಿನ ಮಧ್ಯೆ ಬಾಯಿ ಹಾಕಿದ್ದು, ಪೂಜಾರಿಯವರು ಗರಂ ಆಗಿದ್ದಾರೆ. ಪೂಜಾರಿ ಅವರು ಮಾತು ನಿಲ್ಲಿಸುವ ಸಲುವಾಗಿ ಖಾದರ್ ಥ್ಯಾಂಕ್ಯೂ ಹೇಳಿ ಪೂಜಾರಿಯವರ ಕೋಪಕ್ಕೆ ಗುರಿಯಾಗಿದ್ದಾರೆ. ಈ ಸಂದರ್ಭ ಪೂಜಾರಿ ಅವರು, ನೀನು ದೊಡ್ಡ ಜನನಾ ಎಂದು ಖಾದರ್ ಬಳಿ ಪ್ರಶ್ನಿಸಿದ್ದಾರೆ. ಮಾತ್ರವಲ್ಲ, ನೀನು ಮುಂದಿನ ಚುನಾವಣೆಯಲ್ಲಿ ಸೋಲುತ್ತಿ ಎಂದು ಶಾಪ ಹಾಕಿದ್ದಾರೆ.
ಬಳಿಕ ಸಮಾಧಾನಗೊಂಡು ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಉಳ್ಳಾಲ ದರ್ಗಾದಲ್ಲಿ ಪೂಜೆ ನೆರವೇರಿಸಲು ಸೂಚನೆ ನೀಡಿದ್ದಾರೆ. ಪೂಜಾರಿ ಶಾಪ ಹಾಕುತ್ತಿದ್ದಂತೆ ಒಂದು ಕ್ಷಣ ಖಾದರ್ ಕಸಿವಿಸಿಗೊಂಡಿದ್ದರು.