ಬೆಂಗಳೂರು ನ : ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಕೆದರಲಾರಂಭಿಸಿದೆ. ಅನುಪಮ ಶೆಣೈ ಪಕ್ಷ, ನಟ ಉಪೇಂದ್ರ ಪಕ್ಷ ಗಳ ಹುಟ್ಟು ಒಂದೆಡೆಯಾದರೆ ರಾಜಕಾರಣಿಗಳ ಮಕ್ಕಳ ರಾಜಕೀಯ ಪ್ರವೇಶಕ್ಕೂ ಕೆಲವೊಂದು ಕಡೆ ವೇದಿಕೆಗಳು ಸಿದ್ದವಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ಯಾಂಡಲ್ವುಡ್ನ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಜಗದೀಶ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿಗಳು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಹಾಗೆಂದು ಅಮೂಲ್ಯ ರಾಜಕೀಯ ಪ್ರವೇಶವನ್ನು ಅಲ್ಲಗಳೆಯುವಂತೆಯೂ ಇಲ್ಲ ಅದಕ್ಕೆ ಕಾರಣವೂ ಇದೆ . ಹೇಳಿ ಕೇಳಿ ಅವರ ಪತಿಯ ಮನೆ ರಾಜಕೀಯ ಹಿನ್ನಲೆಯುಳ್ಳ ಮನೆ. ಅಮೂಲ್ಯರ ಮಾವ ರಾಮಚಂದ್ರ ಅವರು ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಆರ್.ಆರ್. ನಗರದ ಬಿಜೆಪಿಯ ಪ್ರಬಲ ನಾಯಕರಾಗಿದ್ದಾರೆ. ಇದೇ ಹಾದಿಯಲ್ಲಿ ನಡೆಯುತ್ತಿರುವ ಜಗದೀಶ್ ಅವರಿಗೂ ಅವರ ಪತ್ನಿ ಅಮೂಲ್ಯ ಸಾಥ್ ನೀಡುತ್ತಿದ್ದಾರೆ. ಜಗದೀಶ್ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಇದ್ದಕ್ಕೆ ಅಮೂಲ್ಯ ಕೂಡಾ ಜತೆಯಾಗುತ್ತಿದ್ದಾರೆ, ಹೀಗಾಗಿ ಪತಿ ಅಥವಾ ಪತ್ನಿಯ ರಾಜಕೀಯ ಎಂಟ್ರಿ ತಳ್ಳಿ ಹಾಕುವಂತಿಲ್ಲ.