ಪುತ್ತೂರು,ಮಾ25(AZM):ಸಾಬೂನು ಹಾಗೂ ಕಾಫಿ ಹುಡಿಯನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ ಚಾಲಕನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಆತನಿಂದ ಹಣ ಹಾಗೂ ಮೊಬೈಲ್ ಅನ್ನು ದೋಚಿ ಪರಾರಿಯಾಗಿರುವ ಘಟನೆ ಪುತ್ತೂರು ತಾಲೂಕು ಗೋಳಿತ್ತೊಟ್ಟು ಗ್ರಾಮದ ಶಿರಡಿಗುಡ್ಡೆ ಎಂಬಲ್ಲಿ ಸೋಮವಾರ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಅಂಬರೀಶ್ ಎಸ್.ಆರ್ (35) ಎಂದು ಗುರುತಿಸಲಾಗಿದೆ. ಅಂಬರೀಶ್ ಎಂಬವರು ಚಿಕ್ಕಬಳ್ಳಾಪುರದ ಖಾಸಗಿ ಕಂಪೆನಿಯೊಂದರ ಸಾಬೂನು ಹಾಗೂ ಕಾಫಿ ಹುಡಿಯನ್ನು ತುಂಬಿಸಿಕೊಂಡ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಪುತ್ತೂರು ಶಿರಾಡಿಗುಡ್ಡೆ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಇಂಡಿಕಾ ಕಾರೊಂದು ಲಾರಿಗೆ ಅಡ್ದ ನಿಲ್ಲಿಸಿದೆ. ಬಳಿಕ ಕಾರಿನಿಂದ ಇಳಿದ ಮೂವರು ದುಷ್ಕರ್ಮಿಗಳು ಲಾರಿ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ, ಆತನಿಗೆ ಹಲ್ಲೆ ನಡೆಸಿ, ಚಾಲಕನ ಮೂಗು ಹಾಗೂ ಬಾಯಿಯನ್ನು ಬಟ್ಟೆಯಿಂದ ಹಾಗೂ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ಚಾಲಕನ ಕೈಯಲ್ಲಿದ ಹಣ ಹಾಗೂ ಮೊಬೈಲ್ ಅನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.