ಉಡುಪಿ, ಮಾ26(SS): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಸಿದ್ದು, ಜೊತೆಗೆ ಅಫಿದವಿತ್ನಲ್ಲಿ ಒಟ್ಟು 87.32 ಕೋಟಿ ರೂ.ಗಳ ಚರಾಸ್ಥಿ ಹಾಗೂ ಸ್ಥಿರಾಸ್ಥಿಯನ್ನು ಘೋಷಿಸಿದ್ದಾರೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಪ್ರಮೋದ್ ಮಧ್ವರಾಜ್ ಅವರು ₹78,46,94,096 ಆಸ್ತಿ ಘೋಷಿಸಿಕೊಂಡಿದ್ದರು. ಒಂದೇ ವರ್ಷದಲ್ಲಿ ಅವರ ಆಸ್ತಿ ಮೌಲ್ಯ ರೂ. 8,84,11,763 ಹೆಚ್ಚಾಗಿದೆ. 2018ರಲ್ಲಿ ಸಾಲವೂ ಇರಲಿಲ್ಲ.
ಪ್ರಮೋದ್ ಮಧ್ವರಾಜ್ ಅವರ ಪತ್ನಿ ಸುಪ್ರಿಯಾ ಪ್ರಮೋದ್ ಮಧ್ವರಾಜ್ ಹಾಗೂ ಪುತ್ರಿ ಪ್ರತ್ಯಕ್ಷ ಪ್ರಮೋದ್ ಮಧ್ವರಾಜ್ ಇಬ್ಬರೂ ಕೋಟ್ಯಧೀಶ್ವರರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಪತ್ನಿ ಸುಪ್ರಿಯಾ ಪ್ರಮೋದ್ ಹೆಸರಿನಲ್ಲಿ ಒಟ್ಟು 5,70,06,557 ರೂ. ಮೌಲ್ಯದ ಚರಾಸ್ಥಿ ಮತ್ತು 2,86,55,000 ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿದ್ದಾರೆ.
ಪ್ರಮೋದ್ ವಿವಿಧ ಬ್ಯಾಂಕ್ ಖಾತೆಗಳಲ್ಲಿ 72 ಲಕ್ಷ ರೂ. ವಿವಿಧ ಬಾಂಡ್ಗಳಲ್ಲಿ 11.07 ಕೋಟಿ ರೂ. ಹಾಗೂ ಎನ್ಎಸ್ಎಸ್, ಪೋಸ್ಟಲ್, ವಿಮೆಗಳಲ್ಲಿ 1.55ಕೋಟಿ ರೂ.ಹೂಡಿಕೆ ಮಾಡಿದ್ದಾರೆ. 10 ಲಕ್ಷ ರೂ.ಮೌಲ್ಯದ 424.26ಗ್ರಾಂ ಚಿನ್ನ ಅವರ ಬಳಿ ಇದೆ. ಪುತ್ರಿ ಪ್ರತ್ಯಕ್ಷ ಪ್ರಮೋದ್ ಒಟ್ಟು 3,19,72,362 ರೂ. ಆಸ್ತಿಯನ್ನು ಹೊಂದಿದ್ದಾರೆ. ಪ್ರಮೋದ್ ಬಳಿ 7.65 ಲಕ್ಷ ರೂ.ನಗದು, ಪತ್ನಿ ಬಳಿ 2.94 ಲಕ್ಷ ರೂ.ನಗದು ಇವೆ.
ಇದು ಕಳೆದ ಎಪ್ರಿಲ್ನಲ್ಲಿ ಪ್ರಮೋದ್, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿಯ ವಿವರಕ್ಕೆ ಹೋಲಿಸಿದರೆ 8.84 ಕೋಟಿ ರೂ.ಏರಿಕೆಯಾಗಿದೆ. 10 ತಿಂಗಳ ಹಿಂದೆ ಅವರು ಒಟ್ಟು 78.46 ಕೋಟಿ ರೂ. ಮೌಲ್ಯದ ಚರಾಸ್ಥಿ-ಸ್ಥಿರಾಸ್ಥಿಯನ್ನು ಘೋಷಿಸಿದ್ದರು.
83,71,38,439 ರೂ. ಮೌಲ್ಯದ ಚರಾಸ್ಥಿ ಹಾಗೂ ಒಟ್ಟು 3,59,67,420ರೂ. ಮೌಲ್ಯದ ಸ್ಥಿರಾಸ್ಥಿಯನ್ನು ಹೊಂದಿರುವ ಪ್ರಮೋದ್ ಮಧ್ವರಾಜ್ ವಿರುದ್ಧ ಯಾವುದೇ ಪ್ರಕರಣಗಳು ಈವರೆಗೆ ದಾಖಲಾಗಿಲ್ಲ.