ಉಡುಪಿ, ಮಾ26(SS): ಲೋಕಸಭಾ ಸ್ಥಾನ ಹೊಂದಾಣಿಕೆ ಹಿಂದೆ ಅನೇಕ ರಹಸ್ಯ, ಸತ್ಯಗಳಿವೆ. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಮಾಡಿದ್ದು ಕೋಮುವಾದಿಗಳು ಅಧಿಕಾರಕ್ಕೆ ಬಾರದಂತೆ ತಡೆಯಲು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
ನಗರದಲ್ಲಿರುವ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜೆಡಿಎಸ್ - ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಳ್ಳುಗಳನ್ನೇ ಹೆಣೆಯುತ್ತಿದ್ದು ಅವರಿಗೆ ಈ ಬಾರಿ ಅವಕಾಶ ನೀಡದಿರಿ. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಮಾಡಿದ್ದು ಕೋಮುವಾದಿಗಳು ಅಧಿಕಾರಕ್ಕೆ ಬಾರದಂತೆ ತಡೆಯಲು. ಯಾವುದೇ ಕಾರಣಕ್ಕೂ ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು ಎಂದು ಹೇಳಿದ್ದಾರೆ.
ಈ ವೇಳೆ ಸಚಿವ ಕೆ. ಜೆ. ಜಾರ್ಜ್ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ - ಜೆಡಿಎಸ್ ಜತೆಯಾಗಿ ಬಿಜೆಪಿ ವಿರುದ್ಧ ಹೋರಾಡಿ ಗೆಲುವು ಸಾಧಿಸಬೇಕು. ರಾಹುಲ್ ಗಾಂಧಿ ಪ್ರಧಾನಿಯಾಗುವ ಅವಕಾಶಕ್ಕೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬೆಂಬಲವಿದೆ. ಕುತಂತ್ರದಿಂದ ಸೋಲಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಕರಾವಳಿಯ ನಾಲ್ಕು ಯುವಜನ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮೀನುಗಾರರು, ರೈತರು, ಯುವಕರು, ಮಹಿಳೆಯರ ಸಮಸ್ಯೆ ಬಗೆಹರಿಸಲು ಸೇವೆ ನಿಟ್ಟಿನಲ್ಲಿ ಕಟಿಬದ್ಧನಾಗುವೆ ಎಂದು ಭರವಸೆ ನೀಡಿದ್ದಾರೆ.