ಮಂಗಳೂರು, ಮಾ26(SS): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಟಿಕೆಟ್ ಪಕ್ಕಾ ಆಗುತ್ತಲೇ ಧಾರ್ಮಿಕ ಕೇಂದ್ರಗಳ ಭೇಟಿ, ಹಿರಿಯ ಆಶೀರ್ವಾದದ ಮೂಲಕ ನಾಮಪತ್ರ ಸಲ್ಲಿಸಿ ಮಿಥುನ್ ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡು ಬಾರಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ನಿಂದ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಗೆಲುವಿಗಾಗಿ ಗೋಮಾತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಮಾತೆ ಗೋವಿನ ಪೂಜೆ ಕರಾವಳಿಯಲ್ಲಿ ವಿಶೇಷವಾಗಿರುವುದರಿಂದ ಮಿಥುನ್ ರೈ ಗೋವಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಿಂದ ಮಿಥುನ್ ರೈ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಆದರೆ ಈ ಬಾರಿ ನಳಿನ್ ಎದುರಾಳಿಯಾಗಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಲಾಗಿದೆ. ಮಾತ್ರವಲ್ಲ, ಕರಾವಳಿಯಲ್ಲಿ ಮಿಥುನ್ ರೈ ಪರ ಬಿರುಸಿನ ಪ್ರಚಾರ ಕೂಡ ನಡೆಯುತ್ತಿದೆ.
ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ವಿನಯ ಕುಮಾರ್ ಸೊರಕೆ, ರಮಾನಾಥ ರೈ, ಬಿ.ಕೆ.ಹರಿಪ್ರಸಾದ್, ಡಾ.ಪರಮೇಶ್ವರ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಮೊದಲಾದ ಹಿರಿಯರ ಆಶೀರ್ವಾದ ಇದ್ದುದರಿಂದ ಯುವ ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆಟಿಕೆಟ್ ಸಿಕ್ಕಿದೆ ಎಂದು ಮಿಥುನ್ ಹೇಳಿದ್ದಾರೆ.