ಉಳ್ಳಾಲ ನ 05: ಜಾತಿಮತ ಬೇಧವಿಲ್ಲದೆ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮುಡಿಪು ಕಟ್ಟೆ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ ಎಂದು ಎಸ್ ಡಿಸಿಸಿ ಬ್ಯಾಂಕಿನ ನಿರ್ದೇಶಕ ಹಾಗೂ ಕಟ್ಟೆ ಫ್ರೆಂಡ್ಸ್ ಸಂಚಾಲಕ ಟಿ.ಜಿ.ರಾಜಾರಾಂ ಭಟ್ ಅಭಿಪ್ರಾಯಪಟ್ಟರು.
ಅವರು ಕಟ್ಟೆ ಫ್ರೆಂಡ್ಸ್ ಮುಡಿಪು , ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಮುಡಿಪು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಜರಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದೈಹಿಕ ಮತ್ತು ಮಾನಸಿಕ ಆರೋಗ್ಯವಿದ್ದಲ್ಲಿ ಸಮಾಜದಲ್ಲಿ ಉತ್ತಮವಾಗಿ ಬಾಳಲು ಸಾಧ್ಯ. ಮಾನಸಿಕ ಆರೋಗ್ಯದ ಮೂಲಕ ಆಧ್ಯಾತ್ಮ ಚಿಂತನೆಯನ್ನು ಬೆಳೆಸಬೇಕಿದೆ. ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಜತೆಗೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಸಂಘಟನೆ ಕಾರ್ಯ ಶ್ಲಾಘನೀಯ ಎಂದರು.
೧೦ ವರ್ಷಗಳ ಹಿಂದೆ ಮುಡಿಪುವಿನಲ್ಲಿರುವ ಆಲದ ಮರವನ್ನು ತೆಗೆಯಲು ಮುಂದಾದ ಸಂದರ್ಭ ಹೋರಾಟ ನಡೆಸಿದಂತಹ ಯುವಕರ ತಂಡ ಕಟ್ಟೆ ಫ್ರೆಂಡ್ಸ್ ಸಂಘಟನೆಯನ್ನು ಸ್ಥಾಪಿಸಿದೆ. ಆಲದ ಮರ ಉಳಿಯುವುದರಿಂದ ಕಟ್ಟೆ ಕೂಡಾ ಉಳಿದಿದ್ದು, ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ಆಶ್ರಯವಾಗಿದೆ ಎಂದರು.
ಈ ಸಂದರ್ಭ ಸಾಮಾಜಿಕ ಮುಂದಾಳು ಜಗದೀಶ್ ಆಳ್ವ ಕುವೆತ್ತಬೈಲು, ಕಟ್ಟೆ ಫ್ರೆಂಡ್ಸ್ ಸಂಚಾಲಕ ಹೇಮನಾಥ.ಎಂ, ಮುಡಿಪು ಕಾಲೇಜು ಉಪನ್ಯಾಸಕ ಉಮೇಶ್ ಕೆ.ಆರ್, ಕೆ.ಎಸ್.ಹೆಗ್ಡೆ ಆಸ್ಪತ್ರೆ ವೈದ್ಯರುಗಳಾದ ಡಾ.ರೋಷೆಲ್, ಡಾ.ಉಮೇಶ್, ಡಾ.ದೇವಿಕಾ ಮುಖ್ಯ ಅತಿಥಿಗಳಾಗಿದ್ದರು.