ಕುಂದಾಪುರ, , ಮಾ27(SS): ತಾಲೂಕಿನ ಗೋಳಿಯಂಗಡಿಯಲ್ಲಿ ಸೋಮವಾರ ಐಸ್ಕ್ಯಾಂಡಿ ತಿಂದು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಮಂಗಳವಾರವೂ ಐಸ್ಕ್ಯಾಂಡಿ ತಿಂದು ಮತ್ತೆ 25 ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಐಸ್ಕ್ಯಾಂಡಿ ತಿಂದು ಅಸ್ವಸ್ಥರಾಗಿರುವ 20 ಮಂದಿಯನ್ನು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, 5 ಮಂದಿಯನ್ನು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಬ್ರಿ ಚಾರ, ಬಚ್ಚಪ್ಪು ನೆಲ್ಲಿಕಟ್ಟೆ ಪ್ರದೇಶದ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಬೈಕಿನಲ್ಲಿ ಮಾರುತ್ತಿದ್ದ ಐಸ್ಕ್ರೀಂ ತಿಂದು ಈ ಘಟನೆ ನಡೆದಿದೆ.
ಬೆಳ್ವೆಯಲ್ಲಿ ಸೋಮವಾರ ಚಿಕಿತ್ಸೆಗೆ ದಾಖಲುಗೊಂಡಿದ್ದ ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್ಗೊಂಡಿದ್ದಾರೆ. ಬೆಳ್ವೆ ಆರೋಗ್ಯ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಶಂಕರನಾರಾಯಣ ವೈದ್ಯಾಧಿಕಾರಿ ಅವರನ್ನು ನಿಯೋಜಿಸಲಾಗಿದೆ. ಚಿಕಿತ್ಸೆಗೊಳಪಟ್ಟವರ ಆರೋಗ್ಯ ಸ್ಥಿರವಾಗಿದ್ದು ಗಾಬರಿಪಡುವ ಅಗತ್ಯವಿಲ್ಲ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ತಿಳಿಸಿದ್ದಾರೆ.
ಹೆಬ್ರಿಯಲ್ಲೂ ಐಸ್ಕ್ರೀಂ ಸೇವಿಸಿ ಹಲವರು ಅಸ್ವಸ್ಥ
ಪರಿಸರದ ಶಾಲಾ ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು ಈ ಪೈಕಿ 15 ಮಂದಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ರಾಘವೇಂದ್ರ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಾ. ನರಸಿಂಹ ನಾಯಕ್, ಡಾ. ಪ್ರಖ್ಯಾತ್ ತಿಳಿಸಿದ್ದಾರೆ.
ಅಸ್ವಸ್ಥಗೊಂಡವರಲ್ಲಿ ವಾಂತಿಭೇದಿ ಹಾಗೂ ವಿಪರೀತ ಜ್ವರ ಹೊಟ್ಟೆನೋವು ಕಾಣಿಸಿಕೊಂಡಿದ್ದು ವೈದ್ಯರು ಕಲುಷಿತ ನೀರು, ಹಳೆ ದಾಸ್ತಾನು, ಅವಧಿ ಮೀರಿದ ವಸ್ತುಗಳನ್ನು ಬಳಸಿ ತಯಾರಿಸಿದ ಐಸ್ಕ್ರೀಂನಿಂದ ಹೀಗಾಗಿರಬಹುದು ಎಂದು ಶಂಕಿಸಿದ್ದಾರೆ.
ಹೆಂಗವಳ್ಳಿ ಗ್ರಾಮದ ತೊಂಬತ್ತು ಎಂಬಲ್ಲಿ ಐಸ್ಕ್ಯಾಂಡಿ ಸೇವನೆಯಿಂದ ಉಂಟಾದ ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಈ ನಡವೆ ಗೋಳಿಯಂಗಡಿ ಪರಿಸರದಲ್ಲಿ ಐಸ್ಕ್ಯಾಂಡಿ ಮಾರಾಟ ಮಾಡಲು ಬಂದವನನ್ನು ಸ್ಥಳೀಯರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ.