ಮಂಗಳೂರು ನ 06: ಒಂಬತ್ತು ವರ್ಷಗಳ ಬಳಿಕ ಕರಾಟೆ ಕಣಕ್ಕೆ ಧುಮುಕಿದ ಮಂಗಳೂರು ಮೇಯರ್ ಕವಿತಾ ಸನಿಲ್ ಮತ್ತೆ ಎದುರಾಳಿಯನ್ನು ಸದೆಬಡಿದಿದ್ದಾರೆ..ಮಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ ಗೆ ತಾನೂ ಅರ್ಹತೆ ಪಡೆಯುವ ವಿಶ್ವಾಸವಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಫೈನಲ್ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್ ಅವರನ್ನು 7-3 ಅಂಕಗಳಿಂದ ಸೋಲಿಸಿದರು. ಆರಂಭದಲ್ಲಿ ನಿಶಾ ತೀವ್ರ ಪೈಪೋಟಿ ನೀಡಿ 3-3 ಅಂಕ ಸಮಗೊಳಿಸಿದರೂ ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ದ್ವಿತೀಯಾರ್ಧದಲ್ಲಿ ಸನಿಲ್ ಅವರ ಅನುಭವ ಅವರಿಗೆ ಸುಲಭ ಮುನ್ನಡೆ ದೊರಕಿಸಿಕೊಟ್ಟಿತು. ಪೃಥ್ವಿ ಹಾಗು ಕಾವ್ಯ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಸೆಮಿಫೈನಲ್ನಲ್ಲಿ ಕವಿತಾ ಸನಿಲ್ ತಮ್ಮ ಎದುರಾಳಿ ಕಾವ್ಯ ಅವರನ್ನು 8-0 ಅಂಕಗಳಿಂದ ಬಗ್ಗುಬಡಿದರು. ಶಕ್ತಿಶಾಲಿ ಪಂಚ್ ಮೂಲಕ ಎದುರಾಳಿ ವಿರುದ್ಧ ಆರಂಭದಿಂದಲೇ ಪ್ರಹಾರ ನಡೆಸಿದ ಸನಿಲ್ ಎದುರಾಳಿಗೆ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ.