ಮಂಗಳೂರು, ಮಾ27(SS): ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯನ್ನು ಪ್ರಮುಖವಾಗಿಸಿಕೊಂಡು ಜೆಡಿಎಸ್ ಸಹಕಾರದೊಂದಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 10 ವರ್ಷ ಸಂಸದರೇ ಇಲ್ಲದ ಪರಿಸ್ಥಿತಿ ಇತ್ತು. ಈ ಚುನಾವಣೆಯಲ್ಲಿ ನಿಷ್ಕ್ರೀಯ ಸಂಸದರನ್ನು ಮನೆಗೆ ಕಳುಹಿಸಿ ಕಾಂಗ್ರೆಸ್ ನ ಮಿಥುನ್ ರೈ ಅವರನ್ನು ಚುನಾಯಿಸಲು ಜನರು ನಿರ್ಧರಿಸಿದ್ದಾರೆ ಸಂಸದ ನಳಿನ್ ಕುಮಾರ್ ಕಟೀಲು ನಿಷ್ಕ್ರೀಯರಾಗಿದ್ದರೂ ಚೌಕಿದಾರ್ ಪೇಟ ಹಾಕಿ ಸುತ್ತುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಒಂದು ವೇಳೆ ಕಾಂಗ್ರೆಸ್ ಗೆದ್ದು, ಕೇಂದ್ರದಲ್ಲಿ ಸರಕಾರ ರಚಿಸಿದರೆ ಮಂಗಳೂರು ರೈಲ್ವೆ ವಲಯ ರಚನೆ, ಬಂದರು ಅಭಿವೃದ್ಧಿ, ವಿಮಾನ ನಿಲ್ದಾಣದ ಖಾಸಗೀಕರಣ ಹಿಂಪಡೆದು, ಸಂಪೂರ್ಣ ಅಭಿವೃದ್ಧಿ, ಮಂಗಳೂರಿನಲ್ಲಿ ಐಐಟಿ ಸ್ಥಾಪನೆ, ವಿಜಯ ಬ್ಯಾಂಕ್ ವಿಲೀನ್ ಪ್ರಕ್ರಿಯೆ ಹಿಂಪಡೆಯುವುದು ಸೇರಿದಂತೆ ಹಲವಾರು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಮಿಥುನ್ ರೈ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಳಿಕ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ.ಇದೇ ಅಲೆಯನ್ನು ಕೊನೆ ತನಕ ಕೊಂಡೊಯ್ದು ಮತಗಳನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.