ಬಂಟ್ವಾಳ,ಮಾ 27(MSP): ಮುಸುಕುಧಾರಿ ತಂಡವೊಂದು, 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಕಡೇಶಿವಾಲಯ ಎಂಬಲ್ಲಿ ಮಾ.26 ರ ಮಂಗಳವಾರ ನಡೆದಿದೆ.
ಭಂಡಾರಿಬೆಟ್ಟು ನಿವಾಸಿ ಅಬ್ದುಲ್ ಲತೀಫ್ (50) ದುಷ್ಕರ್ಮಿಗಳಿಂದ ದಾಳಿಗೊಳಗಾದ ವ್ಯಕ್ತಿ.
ಮಂಗಳವಾರ ರಾತ್ರಿ ಅಬ್ದುಲ್ ಲತೀಫ್ ಅವರು, ಭಂಡಾರಿಬೆಟ್ಟುವಿನಲ್ಲಿರುವ ಸಹೋದರರ ಮನೆಗೆ ಹೋಗುತ್ತಿರುವಾಗ, ಮುಸುಕುಧಾರಿ ತಂಡವೊಂದು ಅವರನ್ನು ತಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದೆ. ಘಟನೆಯಿಂದ ಲತೀಫ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಲತೀಫ್ ಅವರ ಮೇಲೆ ತಿಂಗಳ ಹಿಂದೆ ರಥಬೀದಿ ಎಂಬಲ್ಲಿ ತಂಡವೊಂದು ಹಲ್ಲೆ ಮಾಡಿತ್ತು. ಇದೇ ತಂಡ ಮತ್ತೆ ಹಲ್ಲೆ ನಡೆಸಿರಬಹುದೆಂದು ದೂರುದಾರರು ಶಂಕಿಸಿದ್ದಾರೆ.
ಘಟನೆಗೆ ಸ್ಪಷ್ಟ ಕಾರಣ ತಿಳಿದುಬರಬೇಕಿದೆ.