ವರದಿ – ಸುಪ್ರೀತಾ ಸಾಲ್ಯಾನ್
ಸುಡುಬಿಸಿಲಿನ ವಾತವರಣ ಕರಾವಳಿಯ ಜನರಿಗೆ ತೀರಾ ತ್ರಾಸದಾಯಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬಿಸಿಲಿನ ಝಳ ತೀವ್ರವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಜನವರಿ ಅಂತ್ಯದವರೆಗೂ ಅಷ್ಟೇನೂ ಉಷ್ಣಾಂಶ ಹೆಚ್ಚಳವಾಗಿರಲಿಲ್ಲ. ಫೆಬ್ರವರಿ ಎರಡನೇ ವಾರದ ಬಳಿಕವಷ್ಟೇ ತಾಪಮಾನದಲ್ಲಿ ಏರಿಕೆಯಾಗಲಾರಂಭಿಸಿತು. ಇದೀಗ ಕರಾವಳಿಯಲ್ಲಿ ಮೈ ಸುಡುವಷ್ಟು ರಣ ಬಿಸಿಲಿದೆ.
ಮಂಗಳೂರು ನಗರದಲ್ಲಿ ಸುಡು ಬಿಸಿಲಿನ ಪರಿಣಾಮ ಮಧ್ಯಾಹ್ನದ ವೇಳೆಗೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ನಗರದಲ್ಲಿರುವ ಹೆಚ್ಚಿನ ರಸ್ತೆಗಳು ಜನರಿಲ್ಲದೆ ಖಾಲಿ ಎನಿಸುತ್ತಿವೆ. ಗ್ರಾಹಕರಿಲ್ಲದೆ ಬೀದಿ ವ್ಯಾಪಾರಿಗಳು ಪಕ್ಕದಲ್ಲೇ ನೆರಳಿನ ಆಶ್ರಯ ಪಡೆಯುತ್ತಿದ್ದಾರೆ.
ಕರಾವಳಿಯಲ್ಲಿ ಉರಿ ಬಿಸಿಲಿನಿಂದ ತತ್ತರಿಸುತ್ತಿರುವ ಜನರು ಸದ್ಯ ಮಣ್ಣಿನ ಮಡಕೆಗೆ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಮಣ್ಣಿನ ಮಡಿಕೆಗಳಿಗೆ ಎಲ್ಲಿಲ್ಲದ ಮಹತ್ವವಿತ್ತು. ಆದರೆ ಆಧುನಿಕತೆ ಬೆಳೆದಂತೆ ಮಣ್ಣಿನ ಮಡಿಕೆ ಮೂಲೆ ಗುಂಪಾಗಿದೆ. ಆದರೆ ಮೂಲೆ ಗುಂಪಾಗಿರುವ ಮಣ್ಣಿನ ಮಡಕೆಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ. ಹೌದು, ಮಂಗಳೂರಿನಲ್ಲಿ ಬಿಸಿಲು ತಾರಕಕ್ಕೇರಿದ್ದು, ಜನ ಬಸವಳಿಯುವಂತಾಗಿದೆ. ಕೆಂಡವನ್ನು ಬಟ್ಟೆಯಲ್ಲಿ ಕಟ್ಟಿಕೊಂಡ ಸ್ಥಿತಿಯಿದೆ. ಹೀಗಾಗಿ ಜನ ತಣ್ಣನೆಯ ನೀರಿಗಾಗಿ ಮಣ್ಣಿನ ಮಡಿಕೆಯ ಮೊರೆ ಹೋಗುತ್ತಿದ್ದಾರೆ.
ಕರಾವಳಿಯಲ್ಲಿ ಬಿಸಿಲಿನ ತಾಪಮಾನ ದಿನೇ ದಿನೆ ಏರುತ್ತಿದ್ದು, ಜನರು ಕುಂಬಾರರು ತಯಾರು ಮಾಡಿದ ಮಣ್ಣಿನ ಮಡಿಕೆಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ನಗರದಲ್ಲಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ನಗರದಲ್ಲಿ ದಿನೇ ದಿನೆ ತಾಪಮಾನ ಏರುತ್ತಿರುವುದರಿಂದ ಜನರು ಬಿಸಿಲಿನಿಂದ ಕೊಂಚ ನೀರಾಳರಾಗಲು, ಮಣ್ಣಿನ ಮಡಕೆಯಲ್ಲಿನ ನೀರು ಕುಡಿಯಲು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಮನೆಗಳಲ್ಲಿ ಫ್ರೀಜ್ ಇದ್ದರೂ, ಮಡಿಕೆಗಳನ್ನು ಖರೀದಿ ಮಾಡುತ್ತಿದ್ದಾರೆ.