ಮಂಗಳೂರು,ಮಾ27(AZM):ಲೋಕಸಭಾ ಚುನಾವಣೆಯ ಹಿನ್ನಲೆ ದ.ಕ. ಜಿಲ್ಲೆಯಲ್ಲಿ ಒಟ್ಟು 15 ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸ್ವೀಕರಿಸಿದ್ದು, ಅವುಗಳಲ್ಲಿ 14 ನಾಮಪತ್ರಗಳನ್ನು ಅಂಗೀಕರಿಸಲಾಗಿದೆ. ಹಾಗೂ 1 ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್, ಬಿಜೆಪಿಯಿಂದ ಸುದರ್ಶನ, ಕಾಂಗ್ರೆಸ್ ನಿಂದ ಮಿಥುನ್ ರೈ, ಸೋಶಿಯಲ್ ಡೆಮಾಕ್ರಟಿಕ್ ಪಕ್ಷದಿಂದ ಮಹಮ್ಮದ್ ಇಲಿಯಾಸ್, ಇಸ್ಮಾಯಿಲ್ ಶಾಫಿ ಕೆ, ಬಿಎಸ್ಪಿಯಿಂದ ಸತೀಶ್ ಸಾಲ್ಯಾನ್ , ಲೋಕ ತಾಂತ್ರಿಕ ಜನತಾದಳ -ಹಿಂದುಸ್ಥಾನ ಜನತಾ ಪಾರ್ಟಿಯಿಂದ ಸುಪ್ರೀತ್ ಕುಮಾರ್ ಪೂಜಾರಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ ಶ್ರೀನಿವಾಸ ಸಿ, ಪಕ್ಷೇತರರಾಗಿ ಡೊಮಿನಿಕ್ ಅಲೆಗ್ಸಾಂಡರ್ ಡಿಸೋಜಾ, ಮಹಮ್ಮದ್ ಖಾಲಿದ್, ವೆಂಕಟೇಶ್ ಬೆಂಡೆ, ಅಬ್ದುಲ್ ಹಮೀದ್, ಸುರೇಶ್ ಪೂಜಾರಿ ಎಚ್,ಡಾ. ದೀಪಕ್ ರಾಜೇಶ್ ಕುವೆಲ್ಲೊ, ಮ್ಯಾಕ್ಸಿಂ ಪಿಂಟೋ ಎಂಬವರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು. ಇವರಲ್ಲಿ ಬಿಜೆಪಿಯ ಡಮ್ಮಿ ಅಭ್ಯರ್ಥಿ ಸುದರ್ಶನರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಒಟ್ಟು 16,97,417 ಮತದಾರರು ನೋಂದಣಿಯಾಗಿದ್ದು, ಅದರಲ್ಲಿ 8,33,719 ಪುರುಷ ಮತದಾರರಿದ್ದಾರೆ ಹಾಗೂ 8,63,599 ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಅಕ್ರಮ 8,73,000 ನಗದನ್ನು ಮುಟ್ಟುಗೋಲು ಹಾಕಲಾಗಿದ್ದು. 53805.52 ಲೀ.ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ 73,31,000 ಮೌಲ್ಯದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.