ಮಂಗಳೂರು,ಮಾ 27(MSP): ಲಿಫ್ಟ್ ನಲ್ಲಿ ಬಾಲಕನೊಬ್ಬ ಸಿಲುಕಿ ಸಾವನ್ನಪ್ಪಿದ ಘಟನೆ ನಗರದ ಚಿಲಿಂಬಿಯ ಭಾರತಿ ಹೈಟ್ಸ್ ಅಪಾರ್ಟ್ ಮೆಂಟ್ ನಲ್ಲಿ ಮಾ.27 ರ ಬುಧವಾರ ಸಂಜೆ ನಡೆದಿದೆ.
ಮೃತ ಬಾಲಕನನ್ನು ಬಾಗಲಕೋಟೆಯ ಹುನಗಂದದ ನಿವಾಸಿ ನೀಲಪ್ಪ ಅವರ ಪುತ್ರ ಮಂಜುನಾಥ್ (8) ಎಂದು ಗುರುತಿಸಲಾಗಿದೆ. ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಬಾಲಕ ಉರ್ವ ಬಳಿ ಇರುವ ಕೆನರಾ ಹೈ ಪ್ರೈಮರಿ ಸ್ಕೂಲ್ ನಲ್ಲಿ ಎರಡನೇ ತರಗತಿ ಓದುತ್ತಿದ್ದ.
2018ರ ಆಗಸ್ಟ್ ತಿಂಗಳಲ್ಲಿ ಕದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ವಾಸ್ಲೇನ್ನ ಅಪಾರ್ಟ್ಮೆಂಟ್ನಲ್ಲಿ ಬಂಟ್ವಾಳ ಮೂಲದ ಅಡ್ಡೂರಿನ ದಂಪತಿಯ ಪುತ್ರ ಮುಹಮ್ಮದ್ ಸಿನಾನ್ (7) ಸಿಲುಕಿ ಸಾವನ್ನಪ್ಪಿದ್ದ. ಈ ಘಟನೆಯ ನೆನಪು ಮಾಸಿಹೋಗುವ ಮೊದಲೇ ಮತ್ತೊಂದು ದುರಂತಕ್ಕೆ ಮಂಗಳೂರು ಸಾಕ್ಷಿಯಾಗಿದೆ.