ಉಡುಪಿ,ಮಾ27(AZM):ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅಚಲ. ಯಾವುದೇ ಕಾರಣಕ್ಕೂ ನಾಮಪತ್ರವನ್ನು ಹಿಂಪಡೆಯುವುದಿಲ್ಲ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಕುರಿತು ಇಂದು ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಜೆಡಿಎಸ್ಗೆ ಜನಬೆಂಬಲ ಇಲ್ಲ. ಪ್ರಬಲವಾದ ಅಭ್ಯರ್ಥಿ ಕೂಡ ಇಲ್ಲ. ಹಾಗಾಗಿ ನಮ್ಮ ಕಾರ್ಯಕರ್ತರ ಶ್ರಮ ವ್ಯರ್ಥ ಮಾಡಬೇಡಿ. ನಾವು ಈಗಾಗಲೇ ಜಿಲ್ಲೆಯಾದ್ಯಂತ ಶೋಭಾ ಕರಂದ್ಲಾಜೆ ವಿರುದ್ಧದ ವಾತಾವಾರಣ ಸೃಷ್ಠಿ ಮಾಡಿದ್ದೇವೆ ಎಂಬುವುದನ್ನೂ ಮನವರಿಕೆ ಮಾಡಿದ್ದೇವೆ. ಆದರೂ ಪಕ್ಷದಲ್ಲಿ ಸಕ್ರೀಯರಾಗಿರುವ ನನ್ನಂತಹ ಕಾರ್ಯಕರ್ತರ ಗಮನಕ್ಕೆ ತರದೆ, ನಮ್ಮಲ್ಲಿ ಒಂದು ಮಾತು ಕೇಳದೆ ಏಕಾಏಕಿಯಾಗಿ ಈ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ಉಡುಪಿ–ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಕೆಪಿಸಿಸಿ ಮಟ್ಟದ ಬಹುತೇಕ ಪದಾಧಿಕಾರಿಗಳನ್ನು ಭೇಟಿಯಾಗಿ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಅಲ್ಲದೆ ಜಿಲ್ಲೆಯ ಎಲ್ಲ ನಾಯಕರು ಹೈಕಮಾಂಡ್ ತೀರ್ಮಾನವನ್ನು ಒಕ್ಕೊರಳಿನಿಂದ ಖಂಡಿಸಿದ್ದಾರೆ. ಆದರೆ ಈ ಬಗ್ಗೆ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗ ಜೆಡಿಎಸ್ ಕಾಂಗ್ರೆಸ್ನ
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ರನ್ನು ಕಣಕ್ಕಿಳಿಸಿದೆ. ಇದು ದುರದೃಷ್ಟಕರ. ಹಾಗಾಗಿ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಹೈಕಮಾಂಡ್ಗೆ ಸೂಕ್ತ ಸಂದೇಶವನ್ನು ರವಾನಿಸಲು ನಿರ್ಧರಿಸಿದ್ದೇನೆ ಎಂದರು.
ಪ್ರಮೋದ್ ಮಧ್ವರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅವರು ನನ್ನ ಬಳಿ ಬಂದಿದ್ದರು. ಸರಿಯಾಗಿ ಆಲೋಚನೆ ಮಾಡಿ, ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದರು. ಆದರೆ ಈಗ ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ ಯಾವ ಮುಖವನ್ನು ಇಟ್ಟುಕೊಂಡು ಮತದಾರರಲ್ಲಿ ಜೆಡಿಎಸ್ಗೆ ಮತ ಹಾಕಿಯೆಂದು ಕೇಳಲಿ. ಅದು ಸುಲಭದ ಮಾತಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ಮಾರ್ಚ್ 28ರಂದು ಉಡುಪಿಯ ನಗರದಲ್ಲಿ ಪಾದೆಯಾತ್ರೆಯ ಮೂಲಕ ನಿಧಿ ಸಂಗ್ರಹ ಮಾಡುತ್ತೇವೆ. ನಾನು ಸಂಸದರಾದರೆ ಸಾಮಾಜಿಕ ಸಾಮರಸ್ಯ ಕಾಪಾಡುವ ಕೆಲಸವನ್ನು ಗಟ್ಟಿಯಾಗಿ ಮಾಡುತ್ತೇನೆ. ಕ್ಷೇತ್ರದ ಜ್ವಲಂತ ಸಮಸ್ಯೆಯಾದ ಮರಳು ಸಮಸ್ಯೆ, ರೈತರ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್, ಯಜ್ಞೇಶ್ ಆಚಾರ್ಯ ಇದ್ದರು.