ಕಾರ್ಕಳ,ಮಾ27(AZM):ಕ್ಷೇತ್ರದ ಅಭಿವೃದ್ಧಿಯ ದೃಷ್ಠಿಯನ್ನು ಮನದಲ್ಲಿಟ್ಟು ರಾಜಕೀಯಕ್ಕೆ ಬಂದಿದ್ದೇನೆ ಬಿಟ್ಟರೆ ಹಣದ ದುರಾಸೆಗಾಗಿ ರಾಜಕೀಯಕ್ಕೆ ಬಂದಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಹೇಳಿದ್ದಾರೆ.
ಅವರು ಇಂದು ಕಾರ್ಕಳದ ಕಿಸಾನ್ ಸಭಾಭವನದಲ್ಲಿ ನಡೆದ ಕಾಂಗ್ರೆಸ್-ಜನತಾದಳದ ಕಾರ್ಯಕರ್ತರ ಜಂಟಿ ಸಮಾವೇಶವನ್ನು ಉದ್ದೇಶಿಸಿ ಈ ಕುರಿತು ಮಾತನಾಡಿದರು. ನಾನು ಅಭಿವೃದ್ಧಿ ಕಾರ್ಯದಲ್ಲಿ ಎಂದೂ ರಾಜಕೀಯ ಮಾಡಿಲ್ಲ. ಈ ಬಾರಿ ಕಾಂಗ್ರೆಸ್- ಜಾತ್ಯತೀತ ಜನತಾದಳ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭೆಗೆ ಸ್ವರ್ಧಿಸಲು ಅವಕಾಶ ದೊರೆತ್ತಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಕ್ಷೇತ್ರದ ಅಭಿವೃದ್ದಿಗೆ ಕಟ್ಟಿಬದ್ಧನಾಗಿದ್ದೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮಾತಿನ ಮೋಡಿಗೆ ಮತದಾರರು ಮರುಳಾಗಬಾರದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿದೆ. ಅದನ್ನು ಮರೆ ಮಾಚುವ ಸಲುವಾಗಿ ದೇಶ ರಕ್ಷಣೆ ಎಂಬ ವಿಚಾರವನ್ನು ಎದುರಿಗಿಡುತ್ತಿದ್ದಾರೆ. ದೇಶ ರಕ್ಷಣೆಗೆ ದೇಶದ ಸೈನಿಕರು ಇದ್ದಾರೆ. ಅದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಕಾಂಗ್ರೆಸ್ ಸರಕಾರ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸಿ, ಜನಪರ, ಅಭಿವೃದ್ಧಿಪರ ಆಡಳಿತ ನೀಡಿದರೆ ಬಿಜೆಪಿಯದ್ದು ಕೇವಲ ಪ್ರಚಾರ-ಅಪಪ್ರಚಾರಕ್ಕಷ್ಟೇ ಸೀಮಿತ ಎಂದರು.
ಇದೇ ವೇಳೆ ಶೋಭಾ ಕರದ್ಲಾಂಜೆ ಕುರಿತು ವ್ಯಂಗವಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಸಂಸದೆಯಾಗಿ ಮಿಂಚಿ ಮರೆಯಾದ ಶೋಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಕಾಣಸಿಗುತ್ತಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ, ಬಿಜೆಪಿ ಮತೀಯವಾದ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಮಾನವೀಯ ಮೌಲ್ಯ, ಪ್ರೀತಿ, ವಿಶ್ವಾಸ ತುಂಬಿದ್ದ ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತಿ ಮತ ಪಡೆಯುವ ತಂತ್ರ ಬಿಜೆಪಿಯದ್ದು. ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಶ್ರಮಿಸಿದಲ್ಲಿ ಪ್ರಮೋದ್ ಗೆಲುವು ಖಚಿತ ಎಂದರು. ಕಾಂಗ್ರೆಸ್ ಮಾಡಿದ ಸಾಧನೆ ಮೇಲೆ ಮತ ಯಾಚಿಸಿದರೆ, ಬಿಜೆಪಿ ಸುಳ್ಳು ಭರವಸೆ ನೀಡಿ ಮತ ಯಾಚಿಸುತ್ತಿದೆ ಎಂದು ಟೀಕಿಸಿದರು.
ಪ್ರತಿಭಾರಿ ಕ್ಷೇತ್ರ ಬದಲಾಯಿಸುವ ಜಯಮಾನ ಹೊಂದಿದ ಶೋಭಾ ಕರಂದ್ಲಾಜೆ, ಕ್ಷೇತ್ರದ ಅಭಿವೃದ್ಧಿಗೆ ಚಿಕಾಸು ಬೆಲೆ ಕೊಡುವುದಿಲ್ಲ. ಈ ಬಾರಿ ಕ್ಷೇತ್ರ ಬದಲಾಯಿಸುವ ಬಿಜೆಪಿ ಅವರಿಗೆ ಅವಕಾಶ ನೀಡದೇ ಹೋದುದರಿಂದ ಕ್ಷೇತ್ರದ ಮತದಾರರು ಪಕ್ಷ ಭೇದ ಮರೆತು ಬುದ್ದಿಕಲಿಸಬೇಕೆಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.