ಮಂಗಳೂರು,ಮಾ27(AZM):ಸರಣಿ ಹಂತಕ ಸೈನೈಡ್ ಮೋಹನ್ ಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.
ಪುತ್ತೂರು ನಗರ ಠಾಣೆ ಹಾಗೂ ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಗಳಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
2009,ಜ.23ರಂದು ಈತ ಪುತ್ತೂರಿನ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮಡಿಕೇರಿಗೆ ಕರೆದೋಯ್ಧು ಅಲ್ಲಿ ಒಂದು ಲಾಡ್ಜ್ ನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಸೈನೈಡ್ ನೀಡಿ ಕೊಂದು ಹಾಕಿದ್ದ. ಹಾಗೂ ಆಕೆಯ ಚಿನ್ನಾಭರಣಗಳು ದೋಚಿ ಪರಾರಿಯಾಗಿದ್ದ. ಪುತ್ತೂರು ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು.
ಇನ್ನು ಮಡಿಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಡಿಕೇರಿ ತಾಲೂಕಿನ ಪೆರಾಜೆ ಇಂದಿರಾ ಆವಾಜ್ ಕಾಲನಿ ನಿವಾಸಿ 32 ವರ್ಷ ವಯಸ್ಸಿನ ಮಹಿಳೆಯನ್ನು ಈತ ಆನಂದ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಮೈಸೂರಿಗೆ 2009ರ ಮಾ.17ರಂದು ಕರೆದೊಯ್ದಿದ್ದ. ಲಾಡ್ಜ್ನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಅದೇ ದಿನ ಮೈಸೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗರ್ಭನಿರೋಧಕ ಮಾತ್ರೆ ಎಂದು ಸೈನೈಡ್ ನೀಡಿ ಕೊಲೆ ಮಾಡಿದ್ದ. ಬಳಿಕ ಆಕೆಯ ಚಿನ್ನಾಭರಣ ಹಾಗೂ ಮೊಬೈಲ್ನೊಂದಿಗೆ ಪರಾರಿಯಾಗಿದ್ದ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಕೆ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು.
2009 ಅ.21ರಂದು ಬಂಧಿತನಾದ ಮೋಹನ್ ಪೆರಾಜೆಯ ಯುವತಿಯನ್ನು ತಾನೇ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಬಳಿಕ ಸಿಒಡಿ ಡಿವೈಎಸ್ಪಿ ಪುರುಷೋತ್ತಮ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ 44 ಸಾಕ್ಷಿ ವಿಚಾರಣೆ ನಡೆಸಿ, 70 ದಾಖಲೆ, 37 ಸಾಂದರ್ಭಿಕ ಸಾಕ್ಷಗಳನ್ನು ವಿಚಾರಣೆ ನಡೆಸಲಾಗಿತ್ತು. ಆರೋಪಿ ವಿರುದ್ಧ ಎಲ್ಲ ಆರೋಪ ಗಳು ಸಾಬೀತಾದ ಕಾರಣ ಅಪರಾಧಿಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.