ಉಡುಪಿ, ಮಾ28(SS): ಜಿಲ್ಲೆಯ ಪೆರಂಪಳ್ಳಿಯ ಹಲವೆಡೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಇದರಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ದೈವದ ಚಾವಡಿಗೆ ಒಯ್ಯಲು ನಿರ್ಧರಿಸಿದ್ದಾರೆ.
ಪೆರಂಪಳ್ಳಿಯ ಹಲವೆಡೆ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಇಲ್ಲಿನ ಒಣ ಗದ್ದೆಗಳು, ಅಳಿದುಳಿದ ಕಾಡು ಪ್ರದೇಶಗಳಲ್ಲಿ ಒಂದು ವಾರದಿಂದ ದಿಢೀರಾಗಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬುಧವಾರ (ಮಾ.28) ನಾಲ್ಕು ಕಡೆ ಬೆಂಕಿ ಕಾಣಿಸಿ ಕೊಂಡಿದೆ. ಪರಿಣಾಮ, ಸ್ಥಳೀಯರು ತಮ್ಮ ಕೆಲಸ ಬಿಟ್ಟು ಬೆಂಕಿ ನಂದಿಸುವ ಸೇವೆಯಲ್ಲಿ ತೊಡಗಿದ್ದಾರೆ.
ಈ ಕಾಡ್ಗಿಚ್ಚು ನೈಸರ್ಗಿಕವೇ, ಕಿಡಿಗೇಡಿಗಳ ಕೃತ್ಯವೇ, ಅಗೋಚರ ಶಕ್ತಿ ಕಾರಣವೇ, ದೈವ ದೇವರ ಕೋಪವೇ ಎನ್ನುವ ಜಿಜ್ಞಾಸೆ ಹಿನ್ನೆಲೆಯಲ್ಲಿ ,ಊರ ದೈವ ಬೊಬ್ಬರ್ಯನ ವರ್ಷಾವಧಿ ನೇಮದಲ್ಲಿ ಕಾರಣ ಕೇಳಲು ಗ್ರಾಮಸ್ಥರು ಉದ್ದೇಶಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.