ಮಂಗಳೂರು,ಮಾ 28 (MSP): ದುಬೈನಿಂದ ಮಂಗಳೂರಿಗೆ ಬುಧವಾರ ರಾತ್ರಿ ಬಂದಿಳಿಯಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿ ರಾತ್ರಿ ಇಡೀ ವಿಮಾನದಲ್ಲೇ ಕಾಲಕಳೆಯುವಂತಾದ ಘಟನೆ ವರದಿಯಾಗಿದೆ.
ಬುಧವಾರ ರಾತ್ರಿ 11:40 ವಿಮಾನ ಹಾರಾಟ ಆರಂಭಿಸಲಿದೆ ಎಂದು, ಪ್ರಯಾಣಿಕರೆಲ್ಲರನ್ನು ವಿಮಾನದಲ್ಲಿ ಕುಳ್ಳಿರಿಸಲಾಗಿತ್ತು. ಆದರೆ ತಾಸುಗಟ್ಟಲೆ ಕಾದರೂ ದುಬೈಯಿಂದ ಹೊರಡಬೇಕಿದ್ದ ವಿಮಾನ ಹಾರಾಟ ಆರಂಭಿಸಲಿಲ್ಲ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿಮಾನವೂ ಗುರುವಾರ ಮಂಜಾನೆವರೆಗೂ ವಿಮಾನವೂ , ನಿಲ್ದಾಣದಲ್ಲೇ ಬಾಕಿಯಾಗಿತ್ತು. ಇನ್ನೇನು ವಿಮಾನ ಹಾರಾಟ ಆರಂಭಿಸುತ್ತದೆ ಎಂದು ಕಾದು ಸುಸ್ತಾದ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದರು. ಕೊನೆಗೂ ಗುರುವಾರ ನಸುಕಿನ ಜಾವ 5:30ರ ಸುಮಾರಿಗೆ ವಿಮಾನ ಮಂಗಳೂರಿನತ್ತ ಪ್ರಯಾಣ ಆರಂಭಿಸಿತು.
ಏರ್ ಇಂಡಿಯಾ ಸಂಸ್ಥೆಯೂ ಪ್ರಯಾಣಿಕರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡದೇ ವಿಮಾನದಲ್ಲೇ ಉಳಿಸಿಕೊಳ್ಳಲಾಗಿತ್ತು. ಹೀಗಾಗಿ ಮಹಿಳೆಯರು ಮಕ್ಕಳು ತೊಂದರೆಗೊಳಗಾಗಿದ್ದಾರೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕಾರಿಗಳು, ವಿಮಾನ ವಿಳಂಬವಾಗಿರುವುದು ನಿಜ ಆದರೆ ಇದಕ್ಕೆ ನಿಖರ ಕಾರಣ ತಿಳಿದಿಲ್ಲ ಎಂದು ಹೇಳಿದ್ದಾರೆ.